ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ: ಪೋಲಂಡ್‌ನ ‘ಸಿಲ್ವರ್’ಗೆ ಪ್ರತಿಷ್ಠಿತ ಗೋಲ್ಡನ್ ಕಾಂಚ್ ಪ್ರಶಸ್ತಿ
ಮುಂಬೈನಲ್ಲಿ ನಡೆದ 19ನೇ ಆವೃತ್ತಿಯ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (MIFF 2026) ಭಾನುವಾರ ಅದ್ದೂರಿಯಾಗಿ ಸಮಾರೋಪಗೊಂಡಿತು. ಏಳು ದಿನಗಳ ಕಾಲ ನಡೆದ ಈ ಅಂತರರಾಷ್ಟ್ರೀಯ ಉತ್ಸವವು ಸಾಕ್ಷ್ಯಚಿತ್ರ, ಕಿರುಚಿತ್ರ ಹಾಗೂ ಅನಿಮೇಷನ್ ಚಿತ್ರಗಳ ವೈವಿಧ್ಯಮಯ ಪ್ರದರ್ಶನದ ಮೂಲಕ ಸಿನಿಪ್ರೇಮಿಗಳನ್ನು ರಂಜಿಸಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರ ರಾಜ್ಯಪಾಲ ಜಿಷ್ಣು ದೇವ್ ವರ್ಮಾ, ಎಂಐಎಫ್‌ಎಫ್ ಅನ್ನು ವಿಶ್ವದ ಅತ್ಯಂತ ಪ್ರತಿಷ್ಠಿತ ನಾನ್-ಫಿಕ್ಷನ್ ಚಿತ್ರೋತ್ಸವಗಳಲ್ಲಿ ಒಂದೆಂದು ಬಣ್ಣಿಸಿದರು.
ಅಂತರರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪೋಲಂಡ್‌ನ ಸಾಕ್ಷ್ಯಚಿತ್ರ ‘ಸಿಲ್ವರ್’ ಪ್ರತಿಷ್ಠಿತ ಗೋಲ್ಡನ್ ಕಾಂಚ್ ಪ್ರಶಸ್ತಿ ಪಡೆದು ಗಮನ ಸೆಳೆಯಿತು. ಇದೇ ವಿಭಾಗದಲ್ಲಿ ‘ಮಾಯಾಸ್ ಸಾಂಗ್’ ಅತ್ಯುತ್ತಮ ಅನಿಮೇಷನ್ ಚಿತ್ರಕ್ಕಾಗಿ ಸಿಲ್ವರ್ ಕಾಂಚ್ ಪ್ರಶಸ್ತಿಯನ್ನು, ‘ಅಂಡರ್ ದ ಸ್ನೋ’ ಅತ್ಯುತ್ತಮ ಕಿರು ಕಥಾ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡವು.
ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲೂ ಹಲವು ಚಿತ್ರಗಳು ಪ್ರಶಸ್ತಿಗಳ ಕಿರೀಟ ಧರಿಸಿದವು. ‘ಆರ್ಮ್‌ಸ್ಟ್ರಾಂಗ್ ಫ್ರಂ ಅಂಗಾಳಮ್ಮನ್ ಕೋವಿಲ್ ಸ್ಟ್ರೀಟ್’ ಅತ್ಯುತ್ತಮ ಅನಿಮೇಷನ್ ಚಿತ್ರ ಪ್ರಶಸ್ತಿಗೆ ಪಾತ್ರವಾದರೆ, ‘ಸ್ಮಾಲ್ ಕ್ಲೌಡ್ಸ್’ ಅತ್ಯುತ್ತಮ ಕಿರು ಕಥಾ ಚಿತ್ರವಾಗಿ ಆಯ್ಕೆಯಾಯಿತು. ‘ವಾಯಿ’ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಸಿಲ್ವರ್ ಕಾಂಚ್ ಪ್ರಶಸ್ತಿಯನ್ನು ಗೆದ್ದಿತು.
ವಿದ್ಯಾರ್ಥಿ ವಿಭಾಗದಲ್ಲಿ ‘ದಿ ಓಲ್ಡ್ ಬುಲ್ ನೋಸ್, ಆರ್ ವನ್ಸ್ ನ್ಯೂ’ ಅತ್ಯುತ್ತಮ ವಿದ್ಯಾರ್ಥಿ ಚಿತ್ರ ಪ್ರಶಸ್ತಿಯನ್ನು ಪಡೆದರೆ, ‘ದಿ ಲಾಸ್ಟ್ ಶೆಲ್ಟರ್’ ಚಿತ್ರವು ‘ವಿಕಸಿತ ಭಾರತ್/150 ವರ್ಷಗಳ ವಂದೇ ಮಾತರಂ/ಭಾರತ್@2026’ ವಿಶೇಷ ವಿಭಾಗದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಈ ಮೂಲಕ ವಿಶ್ವದ ವಿವಿಧ ದೇಶಗಳ ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ್ದ MIFF 2026 ಯಶಸ್ವಿಯಾಗಿ ತೆರೆಕಂಡಿತು.


