ನವದೆಹಲಿ: ಅಮೆರಿಕದೊಂದಿಗೆ ಪ್ರಸ್ತಾಪಿತವಾಗಿರುವ ವ್ಯಾಪಾರ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ಸ್ಪರ್ಧಾತ್ಮಕ ಅನುಕೂಲ ಕಲ್ಪಿಸಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಭಾರತದ ಕೈಗಾರಿಕಾ ಪರಿವರ್ತನೆ ಕುರಿತ ನಾಲ್ಕನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಗಳು ನ್ಯಾಯಸಮ್ಮತ, ಸಮಾನ ಹಾಗೂ ಸಮತೋಲಿತವಾಗಿರಲಿವೆ ಎಂದು ತಿಳಿಸಿದರು.
ಅಮೆರಿಕದೊಂದಿಗೆ ಪ್ರಸ್ತಾಪಿತವಾಗಿರುವ ಒಪ್ಪಂದದಲ್ಲಿ ರೈತರ ಅಥವಾ ಇತರ ಯಾವುದೇ ಪಾಲುದಾರರ ಸೂಕ್ಷ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಲು ಭಾರತ ಅವಕಾಶ ನೀಡುವುದಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದರು.
ಭಾರತವು ಈಗಾಗಲೇ 38 ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಒಳಗೊಂಡಂತೆ ಒಂಬತ್ತು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ರಾಷ್ಟ್ರಗಳ ಒಟ್ಟು ಆರ್ಥಿಕತೆಯ ಮೌಲ್ಯ ಸುಮಾರು 60 ಟ್ರಿಲಿಯನ್ ಡಾಲರ್ಗಳಷ್ಟಿದೆ ಎಂದು ಅವರು ವಿವರಿಸಿದರು.
ಭಾರತದ ಮುಕ್ತ ವ್ಯಾಪಾರ ಒಪ್ಪಂದಗಳು ಕೇವಲ ಮಾರುಕಟ್ಟೆ ಪ್ರವೇಶ ಅಥವಾ ಸುಂಕ ಕಡಿತಕ್ಕೆ ಸೀಮಿತವಾಗಿಲ್ಲ. ದೇಶದ ಸ್ಪರ್ಧಾತ್ಮಕ ಸಾಮರ್ಥ್ಯಗಳನ್ನು ಬಳಸಿಕೊಂಡು ರಫ್ತು ಹೆಚ್ಚಿಸುವುದು, ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಉದ್ಯಮಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಸೂಕ್ಷ್ಮ ವಲಯಗಳ ಹಿತಾಸಕ್ತಿಯನ್ನು ರಕ್ಷಿಸುವುದು ಇವುಗಳ ಪ್ರಮುಖ ಉದ್ದೇಶಗಳಾಗಿವೆ ಎಂದು ಸಚಿವರು ಹೇಳಿದರು.


