ಅಮೆರಿಕ–ಇರಾನ್: ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ಮಹತ್ವದ ಹೆಜ್ಜೆ ಇಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ 14 ಅಂಶಗಳನ್ನು ಒಳಗೊಂಡ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ (MoU) ವರ್ಚುವಲ್ ಮೂಲಕ ಸಹಿ ಹಾಕಿರುವುದಾಗಿ ವರದಿಯಾಗಿದೆ.
ಈ ಒಪ್ಪಂದದ ಪ್ರಮುಖ ಉದ್ದೇಶ ಎರಡು ರಾಷ್ಟ್ರಗಳ ನಡುವಿನ ವೈಮನಸ್ಸಿಗೆ ತೆರೆ ಎಳೆಯುವುದು, ಜಾಗತಿಕ ತೈಲ ಸಾಗಣೆಗೆ ಪ್ರಮುಖವಾಗಿರುವ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು ಹಾಗೂ ಇರಾನ್ ಮೇಲಿನ ನಿರ್ಬಂಧಗಳು ಮತ್ತು ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಂತಿಮ ಒಪ್ಪಂದದತ್ತ 60 ದಿನಗಳ ಮಾತುಕತೆ ಪ್ರಕ್ರಿಯೆ ಆರಂಭಿಸುವುದಾಗಿದೆ.
ಶ್ವೇತಭವನ ನೀಡಿರುವ ಮಾಹಿತಿಯ ಪ್ರಕಾರ, ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿಯಾದ ವೇಳೆ ಅಧ್ಯಕ್ಷ ಟ್ರಂಪ್ ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದರು.
ಈ ಬೆಳವಣಿಗೆಯನ್ನು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯತ್ತ ಸಾಗುವ ಮಹತ್ವದ ರಾಜತಾಂತ್ರಿಕ ಕ್ರಮವೆಂದು ವಿಶ್ಲೇಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ–ಇರಾನ್ ಸಂಬಂಧಗಳ ಮೇಲೆ ಮಹತ್ತರ ಪರಿಣಾಮ ಬೀರುವ ಸಾಧ್ಯತೆ ಇದೆ.


