ಹೈದರಾಬಾದ್: ಬ್ರಿಕ್ಸ್ (BRICS) ರಾಷ್ಟ್ರಗಳ 12ನೇ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆಗೆ ಭಾರತ ಆತಿಥ್ಯ ವಹಿಸಿದ್ದು, ಎರಡು ದಿನಗಳ ಮಹತ್ವದ ಸಭೆ ಇಂದಿನಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ “ಸ್ಥೈರ್ಯ, ನವೀನತೆ, ಸಹಕಾರ ಮತ್ತು ಸುಸ್ಥಿರತೆ ನಿರ್ಮಾಣ” (Building for Resilience, Innovation, Cooperation and Sustainability) ಎಂಬ ಧ್ಯೇಯವಾಕ್ಯದಡಿ ನಡೆಯಲಿರುವ ಈ ಸಭೆಯಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಕಾರ್ಮಿಕ ಮತ್ತು ಉದ್ಯೋಗ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಸಾಮಾಜಿಕ ಭದ್ರತೆಯ ವಿಸ್ತರಣೆ, ಅಸಂಘಟಿತ ಕಾರ್ಮಿಕರನ್ನು ಔಪಚಾರಿಕ ಕಾರ್ಮಿಕ ವ್ಯವಸ್ಥೆಗೆ ಒಳಪಡಿಸುವುದು, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಸಮಾನ ಅವಕಾಶಗಳನ್ನು ಹೆಚ್ಚಿಸುವುದು ಸೇರಿದಂತೆ ನಾಲ್ಕು ಪ್ರಮುಖ ಆದ್ಯತೆಯ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ.
ಇದಲ್ಲದೆ, ಬ್ರಿಕ್ಸ್ ಉದ್ಯೋಗ ಕಾರ್ಯಪಡೆ (Employment Working Group) ಸಿದ್ಧಪಡಿಸಿರುವ ಕರಡು ಘೋಷಣೆಯನ್ನು ಸಭೆಯಲ್ಲಿ ಪರಿಶೀಲಿಸಿ ಅಂಗೀಕರಿಸುವ ಸಾಧ್ಯತೆಯಿದೆ.
ಬದಲಾಗುತ್ತಿರುವ ಜಾಗತಿಕ ಉದ್ಯೋಗ ಪರಿಸ್ಥಿತಿಯಲ್ಲಿ ಕಾರ್ಮಿಕ ಮಾರುಕಟ್ಟೆ ನೀತಿಗಳು, ಕಾರ್ಮಿಕರ ಕಲ್ಯಾಣ, ಕೌಶಲ್ಯ ಅಭಿವೃದ್ಧಿ ಹಾಗೂ ಸಮಗ್ರ ಉದ್ಯೋಗಾವಕಾಶಗಳ ವಿಸ್ತರಣೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.


