ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಹಾಗೂ ಹೂಡಿಕೆ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಭಾರತ–ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ (Free Trade Agreement – FTA) ಕುರಿತ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಳೆದ ವಾರ ವರ್ಚುವಲ್ ಮೂಲಕ ನಡೆದ ಈ ಮಾತುಕತೆಯಲ್ಲಿ ಎರಡೂ ದೇಶಗಳ ಪ್ರತಿನಿಧಿಗಳು ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು, ಹಲವು ಪ್ರಮುಖ ಅಂಶಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ, ಅನೇಕ ವಿಷಯಗಳಲ್ಲಿ ಸಾಮಾನ್ಯ ಒಮ್ಮತಕ್ಕೆ ಬಂದಿದ್ದಾರೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಭಾರತವು ಮಾಲ್ಡೀವ್ಸ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. 2025–26ನೇ ಹಣಕಾಸು ವರ್ಷದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ 771 ಮಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಮೀರಿದ್ದು, 2024–25ರ 679 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಹೋಲಿಸಿದರೆ 13.54 ಶೇಕಡಾ ಬೆಳವಣಿಗೆ ದಾಖಲಾಗಿದೆ.
ಪ್ರಸ್ತಾವಿತ FTA ಜಾರಿಯಾದರೆ ಎರಡೂ ದೇಶಗಳ ನಡುವೆ ಮಾರುಕಟ್ಟೆ ಪ್ರವೇಶಕ್ಕೆ ಹೆಚ್ಚಿನ ಅವಕಾಶಗಳು ಲಭಿಸುವುದರ ಜೊತೆಗೆ ಹೂಡಿಕೆಗೆ ಉತ್ತೇಜನ, ಆರ್ಥಿಕ ಸಹಕಾರದ ವಿಸ್ತರಣೆ ಹಾಗೂ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ಹೊಸ ಚೈತನ್ಯ ಸಿಗಲಿದೆ ಎಂದು ಸಚಿವಾಲಯ ತಿಳಿಸಿದೆ.
ನ್ಯಾಯಸಮ್ಮತತೆ ಮತ್ತು ಪರಸ್ಪರ ಸಹಕಾರದ ತತ್ವಗಳನ್ನು ಆಧಾರವಾಗಿಟ್ಟುಕೊಂಡು, ಸಮತೋಲಿತ, ಸಮಗ್ರ ಹಾಗೂ ವ್ಯಾಪಕ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ದಿಸೆಯಲ್ಲಿ ಎರಡೂ ರಾಷ್ಟ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.


