ತಾಷ್ಕೆಂಟ್: ಬಾಂಗ್ಲಾದೇಶ ವಿರುದ್ಧ 3-0 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದ ಭಾರತ, ಬರೋಬ್ಬರಿ 20 ವರ್ಷಗಳ ಬಳಿಕ AFC U20 ಏಷ್ಯನ್ ಕಪ್‌ನ ಮುಖ್ಯ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ತಾಷ್ಕೆಂಟ್‌ನಲ್ಲಿ ನಡೆದ ಗುಂಪು ‘ಬಿ’ಯ ಅಂತಿಮ ಅರ್ಹತಾ ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಮೆರೆದಿತು. ಪಂದ್ಯದ 25ನೇ ನಿಮಿಷದಲ್ಲಿ ಡ್ಯಾನಿ ಮೀಟೈ ಲೈಸ್ರಾಮ್ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು.
ದ್ವಿತೀಯಾರ್ಧದಲ್ಲಿ ಭಾರತದ ಮುನ್ನಡೆ ಮತ್ತಷ್ಟು ಗಟ್ಟಿಯಾಯಿತು. ಪಂದ್ಯದ 60ನೇ ನಿಮಿಷದಲ್ಲಿ ವಿಶಾಲ್ ಯಾದವ್ ಆಕರ್ಷಕ ಅಕ್ರೋಬ್ಯಾಟಿಕ್ ಫಿನಿಶ್ ಮೂಲಕ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು.
ಬದಲಿ ಆಟಗಾರನಾಗಿ ಕಣಕ್ಕಿಳಿದ ಮೊಹಮ್ಮದ್ ಅರ್ಬಾಶ್ 79ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು.
ಮೂರು ಪಂದ್ಯಗಳಿಂದ 6 ಅಂಕ
ಅರ್ಹತಾ ಟೂರ್ನಿಯಲ್ಲಿ ಇದು ಭಾರತದ ಎರಡನೇ ಗೆಲುವು. ಮೂರು ಪಂದ್ಯಗಳಿಂದ ಒಟ್ಟು ಆರು ಅಂಕ ಗಳಿಸಿದ ಭಾರತ, ಮುಂದಿನ ಹಂತದ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸಿರಿಯಾ ಮತ್ತು ಉಜ್ಬೇಕಿಸ್ತಾನ ನಡುವಿನ ಪಂದ್ಯದ ಫಲಿತಾಂಶಕ್ಕಾಗಿ ಕಾಯಬೇಕಾಯಿತು.
ಆ ಪಂದ್ಯದಲ್ಲಿ ಉಜ್ಬೇಕಿಸ್ತಾನ 3-0 ಅಂತರದಲ್ಲಿ ಸಿರಿಯಾ ವಿರುದ್ಧ ಗೆಲುವು ಸಾಧಿಸಿದ ಬಳಿಕ ಭಾರತ ಎಂಟು ಗುಂಪುಗಳ ಪೈಕಿ ಅತ್ಯುತ್ತಮ ಏಳು ರನ್ನರ್‌ಅಪ್ ತಂಡಗಳಲ್ಲಿ ಒಂದಾಗಿ ಮುಖ್ಯ ಟೂರ್ನಿಗೆ ಅರ್ಹತೆ ಪಡೆಯಿತು.
2006ರ ಬಳಿಕ ಮೊದಲ ಬಾರಿ
ಭಾರತ ಕೊನೆಯ ಬಾರಿ 2006ರಲ್ಲಿ AFC U20 ಏಷ್ಯನ್ ಕಪ್ನಲ್ಲಿ ಆಡಿತ್ತು. ಇದೀಗ 20 ವರ್ಷಗಳ ಬಳಿಕ ಮತ್ತೊಮ್ಮೆ ಈ ಪ್ರತಿಷ್ಠಿತ ಟೂರ್ನಿಯ ಮುಖ್ಯ ಹಂತಕ್ಕೆ ಪ್ರವೇಶಿಸುವ ಮೂಲಕ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಗುಂಪು ‘ಬಿ’ಯಲ್ಲಿ ಉಜ್ಬೇಕಿಸ್ತಾನ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರೆ, ಸಿರಿಯಾ 3 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಬಾಂಗ್ಲಾದೇಶ ಮೂರು ಪಂದ್ಯಗಳಲ್ಲೂ ಸೋಲು ಅನುಭವಿಸಿ ಡೆವಲಪ್‌ಮೆಂಟ್ ಹಂತಕ್ಕೆ ಇಳಿಯಿತು.
ಚೀನಾದಲ್ಲಿ ನಡೆಯಲಿದೆ ಏಷ್ಯನ್ ಕಪ್
ಮುಂದಿನ ವರ್ಷದ ಮಾರ್ಚ್ 24ರಿಂದ ಏಪ್ರಿಲ್ 10ರವರೆಗೆ ಚೀನಾದಲ್ಲಿ AFC U20 ಏಷ್ಯನ್ ಕಪ್ ನಡೆಯಲಿದೆ.
20 ವರ್ಷಗಳ ಬಳಿಕ ಮುಖ್ಯ ಟೂರ್ನಿಗೆ ಅರ್ಹತೆ ಪಡೆದಿರುವ ಭಾರತ, ಈ ಬಾರಿ ಏಷ್ಯಾದ ಯುವ ಫುಟ್‌ಬಾಲ್ ವೇದಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ನಿರೀಕ್ಷೆ ಮೂಡಿಸಿದೆ.


