ನವದೆಹಲಿ: ಭಾರತ ಮತ್ತು ಬಹ್ರೇನ್ ನಡುವಿನ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಮಹತ್ವದ ಚರ್ಚೆಗಳು ನಡೆದಿವೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತಿಳಿಸಿದ್ದಾರೆ.
ಎರಡು ದಿನಗಳ ಬಹ್ರೇನ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಜೈಶಂಕರ್, ಬಹ್ರೇನ್‌ನ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕ್ರೌನ್ ಪ್ರಿನ್ಸ್ ಹಾಗೂ ಪ್ರಧಾನಿ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಉಪಸ್ಥಿತರಿದ್ದರು. ಜೊತೆಗೆ ಉಪಪ್ರಧಾನಿ ಶೇಖ್ ಖಾಲಿದ್ ಬಿನ್ ಅಬ್ದುಲ್ಲಾ ಅಲ್ ಖಲೀಫಾ ಅವರೊಂದಿಗೂ ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸಿದರು.
ಈ ಭೇಟಿಗಳ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯಗಳನ್ನು ಬಹ್ರೇನ್ ನಾಯಕತ್ವಕ್ಕೆ ಜೈಶಂಕರ್ ತಿಳಿಸಿದರು. ಭಾರತ ಮತ್ತು ಬಹ್ರೇನ್ ನಡುವಿನ ದೀರ್ಘಕಾಲದ ಸ್ನೇಹಪರ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಭಾರತ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಬಹ್ರೇನ್‌ನಲ್ಲಿ ವಾಸಿಸುವ ಭಾರತೀಯ ಸಮುದಾಯದ ಸುರಕ್ಷತೆ, ಭದ್ರತೆ ಮತ್ತು ಕಲ್ಯಾಣಕ್ಕಾಗಿ ಅಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಜೈಶಂಕರ್ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಹ್ರೇನ್ ವಿದೇಶಾಂಗ ಸಚಿವ ಡಾ. ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಜೈಶಂಕರ್, ಪ್ರಾದೇಶಿಕ ಹಾಗೂ ಜಾಗತಿಕ ಬೆಳವಣಿಗೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು. ವ್ಯಾಪಾರ, ಹೂಡಿಕೆ, ಆರ್ಥಿಕತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸುವ ಕುರಿತು ಚರ್ಚಿಸಿದರು.
2026–27ರ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾದ ಬಹ್ರೇನ್‌ಗೆ ಜೈಶಂಕರ್ ಅಭಿನಂದನೆ ಸಲ್ಲಿಸಿದರು.
ಬಹ್ರೇನ್‌ನ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಸಂವಾದ ನಡೆಸಿದ ಅವರು, ಅಲ್ಲಿನ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಜೀವನಕ್ಕೆ ಭಾರತೀಯರು ನೀಡುತ್ತಿರುವ ಮಹತ್ವದ ಕೊಡುಗೆಯನ್ನು ಶ್ಲಾಘಿಸಿದರು. ಉಭಯ ದೇಶಗಳ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವಲ್ಲಿ ಅವರ ಪಾತ್ರವನ್ನು ಪ್ರಶಂಸಿಸಿದರು.
ಡಾ. ಜೈಶಂಕರ್ ಅವರು ಪ್ರಸ್ತುತ ಕತಾರ್, ಬಹ್ರೇನ್, ಕುವೈತ್, ಒಮಾನ್, ನ್ಯೂಯಾರ್ಕ್ ಮತ್ತು ಬ್ರಸ್ಸೆಲ್ಸ್ ಒಳಗೊಂಡ 11 ದಿನಗಳ ವಿದೇಶ ಪ್ರವಾಸದಲ್ಲಿದ್ದಾರೆ.


