ನವದೆಹಲಿ: ಭಾರತದ ಒಳನಾಡು ಜಲಮಾರ್ಗಗಳ ಮೂಲಕ ನಡೆಯುವ ಸರಕು ಸಾಗಣೆ ಪ್ರಮಾಣ 2025–26ನೇ ಹಣಕಾಸು ವರ್ಷದಲ್ಲಿ 218 ಮಿಲಿಯನ್ ಮೆಟ್ರಿಕ್ ಟನ್ಗೆ ತಲುಪಿದೆ. ಈ ಮೂಲಕ ಮಾರಿಟೈಮ್ ಇಂಡಿಯಾ ವಿಷನ್ 2030 ಯೋಜನೆಯಡಿ ನಿಗದಿಪಡಿಸಿದ್ದ 200 ಮಿಲಿಯನ್ ಮೆಟ್ರಿಕ್ ಟನ್ ಗುರಿಯನ್ನು ಮೀರಿದೆ ಎಂದು ಬಂದರು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ತಿಳಿಸಿದೆ.
ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2014–15ರಲ್ಲಿ ಒಳನಾಡು ಜಲಮಾರ್ಗಗಳ ಮೂಲಕ 29 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಾಗಣೆಯಾಗಿತ್ತು. 2025–26ರಲ್ಲಿ ಈ ಪ್ರಮಾಣ 218 ಮಿಲಿಯನ್ ಮೆಟ್ರಿಕ್ ಟನ್ಗೆ ಏರಿಕೆಯಾಗಿದ್ದು, ಈ ಅವಧಿಯಲ್ಲಿ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (CAGR) ಶೇ. 20.13ರಷ್ಟಿದೆ.
23 ರಾಜ್ಯಗಳು, 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಲಮಾರ್ಗ ಜಾಲ
ಭಾರತದಲ್ಲಿ ಒಟ್ಟು 111 ರಾಷ್ಟ್ರೀಯ ಜಲಮಾರ್ಗಗಳಿದ್ದು, ಅವು 23 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿ 20,187 ಕಿಲೋಮೀಟರ್ಗೂ ಹೆಚ್ಚು ವ್ಯಾಪ್ತಿಯಲ್ಲಿ ಹರಡಿಕೊಂಡಿವೆ. ಈ ಜಲಮಾರ್ಗಗಳನ್ನು ಸರಕು ಸಾಗಣೆಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಸರಕು ಸಾಗಣೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಲಮಾರ್ಗಗಳ ಸಮೀಕ್ಷೆ, ಆಧುನಿಕ ನೌಕಾಯಾನ ಸೌಲಭ್ಯಗಳು ಹಾಗೂ ಡಿಜಿಟಲ್ ಮಾಹಿತಿ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ. ಹೈಡ್ರೋಗ್ರಾಫಿಕ್ ಸಮೀಕ್ಷೆಗಳ ಮೂಲಕ ಜಲಮಾರ್ಗಗಳ ಸ್ಥಿತಿಗತಿಗಳನ್ನು ಪರಿಶೀಲಿಸುವುದರ ಜೊತೆಗೆ, ಹಡಗುಗಳ ಸುರಕ್ಷಿತ ಸಂಚಾರ ಮತ್ತು ಸರಕು ಸಾಗಣೆಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಒಳನಾಡು ಜಲಸಾರಿಗೆ ಜಾಲದ ವಿಸ್ತರಣೆ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ದೇಶದ ಜಲಮಾರ್ಗಗಳಲ್ಲಿ ಸರಕು ಸಾಗಣೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶವನ್ನು ಸಚಿವಾಲಯ ಹೊಂದಿದೆ.


