ಬಹುಮಾದರಿ ಸಾರಿಗೆ ಯೋಜನೆಗಳಿಗೆ ವೇಗ ನೀಡಿ: ಅಧಿಕಾರಿಗಳಿಗೆ ನಿತಿನ್ ಗಡ್ಕರಿ ಕಟ್ಟುನಿಟ್ಟಿನ ಸೂಚನೆ

1 Min Read
1 Min Read

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (NHLML) ಕೈಗೆತ್ತಿಕೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲಿಸಿ, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ನಡೆದ ಪರಿಶೀಲನಾ ಸಭೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣ ಹಂತದಲ್ಲಿರುವ ಮಲ್ಟಿ-ಮೊಡಲ್ ಲಾಜಿಸ್ಟಿಕ್ಸ್ ಪಾರ್ಕ್‌ಗಳು, ರೋಪ್‌ವೇ ಯೋಜನೆಗಳು, ಇಂಟರ್‌ಮೋಡಲ್ ನಿಲ್ದಾಣಗಳು ಹಾಗೂ ವೇ ಸೈಡ್ ಸೌಲಭ್ಯ ಕೇಂದ್ರಗಳ ಪ್ರಗತಿಯನ್ನು ಸಚಿವರು ಅವಲೋಕಿಸಿದರು.

ಸಭೆಯಲ್ಲಿ ಮಾತನಾಡಿದ ನಿತಿನ್ ಗಡ್ಕರಿ, ಈ ಯೋಜನೆಗಳು ದೇಶದಲ್ಲಿ ಸಮಗ್ರ ಹಾಗೂ ಆಧುನಿಕ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ಮಹತ್ವದ ಹೆಜ್ಜೆಯಾಗಲಿವೆ ಎಂದು ಹೇಳಿದರು. ಇವುಗಳ ಮೂಲಕ ಬಹುಮಾದರಿ ಸಂಪರ್ಕ ವ್ಯವಸ್ಥೆ ಬಲಗೊಳ್ಳುವುದರ ಜೊತೆಗೆ ಹೊಸ ಆರ್ಥಿಕ ಅವಕಾಶಗಳು ಸೃಷ್ಟಿಯಾಗಲಿದ್ದು, ಪ್ರಾದೇಶಿಕ ಸಮತೋಲನದ ಅಭಿವೃದ್ಧಿಗೂ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ಯೋಜನೆಗಳ ಅನುಷ್ಠಾನದಲ್ಲಿ ಎದುರಾಗುತ್ತಿರುವ ಪ್ರಮುಖ ಅಡೆತಡೆಗಳನ್ನು ಪರಿಶೀಲಿಸಿದ ಸಚಿವರು, ಸಂಬಂಧಿತ ಇಲಾಖೆ ಹಾಗೂ ಅಧಿಕಾರಿಗಳು ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿಗಳಿಗೆ ವೇಗ ನೀಡುವಂತೆ ನಿರ್ದೇಶನ ನೀಡಿದರು.

ಈ ಎಲ್ಲಾ ಯೋಜನೆಗಳು ಸಮಯಕ್ಕೆ ಪೂರ್ಣಗೊಂಡರೆ ಸರಕು ಸಾಗಣೆ ದಕ್ಷತೆ ಹೆಚ್ಚುವುದು, ಸಾರಿಗೆ ವೆಚ್ಚ ಕಡಿಮೆಯಾಗುವುದು ಹಾಗೂ ಪ್ರಯಾಣಿಕರಿಗೆ ವಿಶ್ವಮಟ್ಟದ ಮೂಲಸೌಕರ್ಯ ಮತ್ತು ಸೌಲಭ್ಯಗಳು ಲಭ್ಯವಾಗಲಿವೆ ಎಂದು ಗಡ್ಕರಿ ಅಭಿಪ್ರಾಯಪಟ್ಟರು.

ಈ ಯೋಜನೆಗಳು ‘ವಿಕಸಿತ ಭಾರತ’ ಮತ್ತು ‘ಆತ್ಮನಿರ್ಭರ ಭಾರತ’ ನಿರ್ಮಾಣದ ಕನಸನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಹೇಳಿದರು.

Share This Article