ನವದೆಹಲಿ: ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಹರಡುವ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಂದು ವಿಶ್ವದಾದ್ಯಂತ ವಿಶ್ವ ಝೂನೋಸಿಸ್ ದಿನ (World Zoonoses Day) ಆಚರಿಸಲಾಗುತ್ತಿದೆ. ಈ ರೀತಿಯ ರೋಗಗಳು ಸಾರ್ವಜನಿಕ ಆರೋಗ್ಯ, ಪಶು ಆರೋಗ್ಯ ಹಾಗೂ ಜಾಗತಿಕ ಆರೋಗ್ಯ ಭದ್ರತೆಗೆ ಗಂಭೀರ ಸವಾಲು ಎಸೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ‘ಒನ್ ಹೆಲ್ತ್’ (One Health) ಪರಿಕಲ್ಪನೆ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ನೀತಿಯ ಪ್ರಮುಖ ಆಧಾರಸ್ತಂಭವಾಗಿ ರೂಪುಗೊಂಡಿದೆ ಎಂದು ಹೇಳಿದ್ದಾರೆ.
ಮನುಷ್ಯರು, ಪ್ರಾಣಿಗಳು ಹಾಗೂ ಪರಿಸರದ ಆರೋಗ್ಯ ಪರಸ್ಪರ ಸಂಬಂಧ ಹೊಂದಿವೆ ಎಂಬ ತತ್ವದ ಆಧಾರದಲ್ಲಿ ಭಾರತ ಸಮಗ್ರ ಮತ್ತು ಮುನ್ನೆಚ್ಚರಿಕಾ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟರ್ ಫಾರ್ ಒನ್ ಹೆಲ್ತ್ ಝೂನೋಸಿಸ್ ರೋಗಗಳ ಪತ್ತೆ, ತಡೆ ಮತ್ತು ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿವಿಧ ಇಲಾಖೆಗಳ ನಡುವಿನ ಸಮನ್ವಯ, ನಿಗಾವ್ಯವಸ್ಥೆ ಹಾಗೂ ತ್ವರಿತ ಪ್ರತಿಕ್ರಿಯೆ ಮೂಲಕ ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದು ನಡ್ಡಾ ಹೇಳಿದ್ದಾರೆ.
ವಿಶ್ವ ಝೂನೋಸಿಸ್ ದಿನದ ಅಂಗವಾಗಿ, ಜನರು ‘ಒನ್ ಹೆಲ್ತ್’ ಪರಿಕಲ್ಪನೆಗೆ ಬದ್ಧರಾಗಿ ಮನುಷ್ಯರು, ಪ್ರಾಣಿಗಳು ಮತ್ತು ಪರಿಸರದ ಆರೋಗ್ಯ ರಕ್ಷಣೆಗೆ ಕೈಜೋಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವರು ಕರೆ ನೀಡಿದ್ದಾರೆ.


