ನವದೆಹಲಿ: ಜಗನ್ನಾಥ ಸ್ವಾಮಿಯ ರಥಯಾತ್ರೆ ಅಂಗವಾಗಿ ಈ ವರ್ಷ 300ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಸಂಚರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಥಯಾತ್ರೆ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ರೈಲ್ವೆ ಇಲಾಖೆ ವ್ಯಾಪಕ ಸಿದ್ಧತೆ ನಡೆಸಿದೆ ಎಂದು ಹೇಳಿದರು. ಈಗಾಗಲೇ ಸಂಚರಿಸುತ್ತಿರುವ 800ಕ್ಕೂ ಹೆಚ್ಚು ನಿಯಮಿತ ರೈಲುಗಳ ಜೊತೆಗೆ ಹೆಚ್ಚುವರಿಯಾಗಿ 300ಕ್ಕೂ ಹೆಚ್ಚು ವಿಶೇಷ ರೈಲುಗಳು ಸೇವೆ ನೀಡಲಿವೆ ಎಂದು ಮಾಹಿತಿ ನೀಡಿದರು.
ರಥಯಾತ್ರೆಯ ಸಿದ್ಧತೆಗಳನ್ನು ಸ್ವತಃ ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಭಕ್ತರ ಸುಗಮ ಪ್ರಯಾಣ ಹಾಗೂ ರೈಲು ಸಂಚಾರದ ಸಮರ್ಪಕ ನಿರ್ವಹಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಪುರಿ ರೈಲು ನಿಲ್ದಾಣದಲ್ಲಿ ಏಕಕಾಲಕ್ಕೆ 30 ಸಾವಿರ ಪ್ರಯಾಣಿಕರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಶ್ವಿನಿ ವೈಷ್ಣವ್ ತಿಳಿಸಿದರು.
ಇದೇ ವೇಳೆ, ಓಣಂ ಹಬ್ಬದ ಪ್ರಯುಕ್ತವೂ ಪ್ರಯಾಣಿಕರ ಅನುಕೂಲಕ್ಕಾಗಿ 100ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಅವರು ಹೇಳಿದರು.


