ವಾರಾಣಸಿ : ಉತ್ತರ ಪ್ರದೇಶದ ವಾರಾಣಸಿಯ ಲಾಲ್ ಬಹಾದುರ್ ಶಾಸ್ತ್ರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಸಚಿವ ಕೇ. ರಾಮಮೋಹನ್ ನಾಯ್ಡು ಅವರು ಇಂದು ಮೊದಲ ‘ಈಸಿ ಕನೆಕ್ಟ್’ ವಿಮಾನ ಸೇವೆಯನ್ನು ಉದ್ಘಾಟಿಸಿದರು. ಈ ಹೊಸ ಹಬ್-ಅಂಡ್-ಸ್ಪೋಕ್ ಮಾದರಿಯಡಿಯಲ್ಲಿ ವಾರಾಣಸಿಯನ್ನು ದೆಹಲಿ ಮೂಲಕ ಜಗತ್ತಿನ ವಿವಿಧ ಅಂತಾರಾಷ್ಟ್ರೀಯ ಗಮ್ಯಸ್ಥಾನಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆ ಆರಂಭವಾಗಿದೆ.
ಈ ಯೋಜನೆಯು ಭಾರತದ ವಿವಿಧ ನಗರಗಳನ್ನು ಸುಗಮವಾಗಿ ಜಾಗತಿಕ ಪ್ರಯಾಣ ಜಾಲಕ್ಕೆ ಸಂಪರ್ಕಿಸುವ ಗುರಿಯನ್ನು ಹೊಂದಿದ್ದು, ದೇಶದ ಯಾವುದೇ ಭಾಗದಿಂದ ಪ್ರಯಾಣಿಕರು ತಮ್ಮ ಸ್ವಂತ ನಗರದಿಂದಲೇ ಅಂತರರಾಷ್ಟ್ರೀಯ ಪ್ರಯಾಣ ಆರಂಭಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಸಚಿವರು, ಈ ಹಬ್-ಸ್ಪೋಕ್ ಮಾದರಿ ನಾಗರಿಕರ ಪ್ರಯಾಣ ವಿಧಾನದಲ್ಲಿ ಮಹತ್ವದ ಬದಲಾವಣೆ ತರಲಿದೆ ಎಂದು ಹೇಳಿದರು. ಕಳೆದ 12 ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿಯನ್ನು ಅವರು ಉಲ್ಲೇಖಿಸಿ, 2014ರಲ್ಲಿ 74 ಇದ್ದ ಕಾರ್ಯನಿರ್ವಹಣಾ ವಿಮಾನ ನಿಲ್ದಾಣಗಳ ಸಂಖ್ಯೆ ಈಗ 160 ಕ್ಕೂ ಅಧಿಕವಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ಆರು ವಾರಗಳಲ್ಲಿ ಇನ್ನೂ ಆರು ವಿಮಾನ ನಿಲ್ದಾಣಗಳನ್ನು ಈ ಹಬ್-ಸ್ಪೋಕ್ ವ್ಯವಸ್ಥೆಗೆ ಸೇರಿಸಲಾಗುವುದು ಎಂದು ಸಚಿವರು ಘೋಷಿಸಿದ್ದಾರೆ.
ಏರ್ ಇಂಡಿಯಾ ನಿರ್ವಹಣೆಯ AI1111 ವಿಮಾನವು ವಾರಾಣಸಿಯಿಂದ ದೆಹಲಿಗೆ ಪ್ರಯಾಣ ಆರಂಭಿಸಿ, ಅಲ್ಲಿ ಮೂಲಕ ದುಬೈ, ಕೊಲಂಬೋ, ಜಿದ್ದಾ, ರಿಯಾದ್, ಕಠ್ಮಂಡು ಮತ್ತು ಫುಕೆಟ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಈಸಿ ಕನೆಕ್ಟ್ ವ್ಯವಸ್ಥೆಯಡಿಯಲ್ಲಿ ಪ್ರಯಾಣಿಕರು ತಮ್ಮ ಅಂತಿಮ ಗಮ್ಯಸ್ಥಾನಕ್ಕೆ ಆರಂಭಿಕ ವಿಮಾನ ನಿಲ್ದಾಣದಲ್ಲೇ ಚೆಕ್-ಇನ್ ಮಾಡಿಕೊಳ್ಳಬಹುದು. ಜೊತೆಗೆ ಇಮಿಗ್ರೇಶನ್ ಪ್ರಕ್ರಿಯೆಯೂ ಮೂಲ ನಿಲ್ದಾಣದಲ್ಲೇ ಪೂರ್ಣಗೊಳ್ಳುವುದರಿಂದ ದೆಹಲಿ ಸೇರಿದಂತೆ ಹಬ್ ವಿಮಾನ ನಿಲ್ದಾಣಗಳಲ್ಲಿ ಬ್ಯಾಗೇಜ್ ಮರುಚೆಕ್ ಮಾಡುವ ಅಗತ್ಯವಿಲ್ಲದೆ ಸುಗಮ ಪ್ರಯಾಣ ಸಾಧ್ಯವಾಗುತ್ತದೆ.


