ನವದೆಹಲಿ: ಆಧುನಿಕ ಪ್ರಗತಿಯನ್ನು ಭಾರತದ ಶ್ರೀಮಂತ ನಾಗರಿಕತೆಯ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ಸಮಾಜವನ್ನು ನಿರ್ಮಿಸುವುದು ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸಿಡಿ ದೇಶಮುಖ್ ಉಪನ್ಯಾಸ 2026 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಗ್ರಾಹಕವಾದಕ್ಕೆ ಒಳಗಾಗದೆ ಸಮೃದ್ಧ ರಾಷ್ಟ್ರವಾಗಬೇಕು, ಭೌತಿಕವಾದಕ್ಕೆ ಸಿಲುಕದೆ ಶ್ರೀಮಂತವಾಗಬೇಕು ಹಾಗೂ ತನ್ನ ನಾಗರಿಕತೆಯ ಮೂಲ ಸ್ವರೂಪವನ್ನು ಕಳೆದುಕೊಳ್ಳದೆ ಜಾಗತಿಕ ಮಟ್ಟದಲ್ಲಿ ಯಶಸ್ಸು ಸಾಧಿಸಬೇಕು ಎಂದು ಹೇಳಿದರು.
ಭಾರತದ ಗುರಿ ಕೇವಲ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವುದಲ್ಲ. ಸಮೃದ್ಧಿಯೊಂದಿಗೆ ಜವಾಬ್ದಾರಿ, ಉದ್ಯಮಶೀಲತೆಯೊಂದಿಗೆ ಹೊಣೆಗಾರಿಕೆ, ನಾವೀನ್ಯತೆಯೊಂದಿಗೆ ನಾಗರಿಕತೆಯ ಜ್ಞಾನವನ್ನು ಹೊಂದಿರುವ ಅಭಿವೃದ್ಧಿ ಹೊಂದಿದ ನಾಗರಿಕತೆಯಾಗಿ ಹೊರಹೊಮ್ಮುವುದು ದೇಶದ ಆಶಯವಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.
ಜಾಗತಿಕ ನಾಯಕತ್ವದೊಂದಿಗೆ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವುದು, ಆರ್ಥಿಕ ಪ್ರಗತಿಯೊಂದಿಗೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಹಾಗೂ ವೈಯಕ್ತಿಕ ಯಶಸ್ಸಿನೊಂದಿಗೆ ಸಾಮೂಹಿಕ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವುದು ಭಾರತದ ಅಭಿವೃದ್ಧಿ ಮಾದರಿಯ ಪ್ರಮುಖ ಅಂಶಗಳಾಗಿವೆ ಎಂದು ಅವರು ಹೇಳಿದರು.
ಭಾರತದ ಅಭಿವೃದ್ಧಿಯ ಪಯಣವು ಆರ್ಥಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗದೆ, ದೇಶದ ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ ಸಂರಕ್ಷಣೆಯೊಂದಿಗೆ ಸಮತೋಲನ ಸಾಧಿಸಬೇಕು ಎಂದು ಹಣಕಾಸು ಸಚಿವೆ ಒತ್ತಿ ಹೇಳಿದರು.


