ಲಿಸ್ಬನ್/ಅಥೆನ್ಸ್/ಮ್ಯಾಡ್ರಿಡ್: ಪೋರ್ಚುಗಲ್, ಗ್ರೀಸ್ ಮತ್ತು ಸ್ಪೇನ್‌ನಲ್ಲಿ ಭುಗಿಲೆದ್ದಿರುವ ಭೀಕರ ಕಾಡ್ಗಿಚ್ಚು ನಿಯಂತ್ರಣಕ್ಕೆ ನೂರಾರು ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಸ್ಪೇನ್ ಮತ್ತು ಇಟಲಿ, ಪೋರ್ಚುಗಲ್‌ಗೆ ಹೆಚ್ಚುವರಿ ಅಗ್ನಿಶಾಮಕ ತಂಡಗಳು ಹಾಗೂ ವಿಮಾನಗಳನ್ನು ಕಳುಹಿಸಿ ನೆರವು ನೀಡಿವೆ.
ಗ್ರೀಸ್‌ನ ಎರಡನೇ ಅತಿದೊಡ್ಡ ನಗರ ಥೆಸಲೋನಿಕಿ ಸಮೀಪ ಮರುಬಳಕೆ ಘಟಕವೊಂದು ಬೆಂಕಿಗಾಹುತಿಯಾದ ಪರಿಣಾಮ ವ್ಯಾಪಕ ಪ್ರಮಾಣದಲ್ಲಿ ವಿಷಕಾರಿ ಹೊಗೆ ಆವರಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಮನೆಯಿಂದ ಹೊರಬರದಂತೆ ಹಾಗೂ ಕಿಟಕಿ–ಬಾಗಿಲುಗಳನ್ನು ಮುಚ್ಚಿಟ್ಟುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಇದೇ ವೇಳೆ, ಗ್ರೀಸ್ ರಾಜಧಾನಿ ಅಥೆನ್ಸ್ ಪಶ್ಚಿಮ ಭಾಗದಲ್ಲೂ ಮತ್ತೊಂದು ದೊಡ್ಡ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಮಾಂಡ್ರಾ ಪ್ರದೇಶದ ಪೈನ್ ಅರಣ್ಯದಲ್ಲಿ ಹೊತ್ತಿಕೊಂಡಿರುವ ಬೆಂಕಿ ನಂದಿಸಲು 155 ಅಗ್ನಿಶಾಮಕ ಸಿಬ್ಬಂದಿ, ಸ್ವಯಂಸೇವಕರು, ವಿಶೇಷ ತಂಡಗಳು, 16 ನೀರು ಸಿಂಪಡಿಸುವ ವಿಮಾನಗಳು ಮತ್ತು 6 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಪೋರ್ಚುಗಲ್‌ನ ವೌಜೆಲಾ ಪ್ರದೇಶದಲ್ಲಿ ಗುರುವಾರ ಆರಂಭವಾದ ಬೆಂಕಿ ಮೂರು ದಿನಗಳಿಂದ ನಿಯಂತ್ರಣಕ್ಕೆ ಸಿಗದೆ ವ್ಯಾಪಕವಾಗಿ ಹರಡುತ್ತಿದೆ. ನಾಗರಿಕ ರಕ್ಷಣಾ ಇಲಾಖೆ ಮಾಹಿತಿ ಪ್ರಕಾರ, 1,200ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಸುಮಾರು 400 ವಾಹನಗಳು ಹಾಗೂ 15 ವಿಮಾನಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಉಪಗ್ರಹ ನಕ್ಷೆ ಸಂಸ್ಥೆ ನೀಡಿರುವ ಮಾಹಿತಿಯಂತೆ, ಕಾಡ್ಗಿಚ್ಚು ಈಗಾಗಲೇ 12 ಸಾವಿರ ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಸುಟ್ಟು ಭಸ್ಮಗೊಳಿಸಿದೆ.
ಯುರೋಪಿಯನ್ ಒಕ್ಕೂಟದ ನಾಗರಿಕ ರಕ್ಷಣಾ ಮತ್ತು ಮಾನವೀಯ ನೆರವು ವಿಭಾಗದ ಪ್ರಕಾರ, ಸ್ಪೇನ್ 120 ಅಗ್ನಿಶಾಮಕ ಸಿಬ್ಬಂದಿ ಹಾಗೂ 45 ವಾಹನಗಳನ್ನು ಪೋರ್ಚುಗಲ್‌ಗೆ ಕಳುಹಿಸಿದ್ದು, ಇಟಲಿ ಮತ್ತು ಸ್ಪೇನ್‌ನಿಂದ ಮೂರು ಅಗ್ನಿಶಾಮಕ ವಿಮಾನಗಳನ್ನೂ ನಿಯೋಜಿಸಲಾಗಿದೆ.
ಇನ್ನೊಂದೆಡೆ, ಸ್ಪೇನ್‌ನ ಈಶಾನ್ಯ ಭಾಗದ ಗಿರೋನಾ ಪ್ರದೇಶದಲ್ಲಿ ಶುಕ್ರವಾರ ಆರಂಭವಾದ ಕಾಡ್ಗಿಚ್ಚು 2,200 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಸುಟ್ಟುಹಾಕಿದೆ. ಬೆಂಕಿಯ ವ್ಯಾಪ್ತಿ ಸುಮಾರು 40 ಕಿಲೋಮೀಟರ್‌ವರೆಗೆ ವಿಸ್ತರಿಸಿದ್ದು, ಅದನ್ನು ತಕ್ಷಣ ನಿಯಂತ್ರಣಕ್ಕೆ ತರುವುದು ಸವಾಲಿನ ಕೆಲಸವಾಗಿದೆ ಎಂದು ಕ್ಯಾಟಲಾನ್ ಅಗ್ನಿಶಾಮಕ ದಳ ತಿಳಿಸಿದೆ.


