‘ಶಿಕ್ಷಣಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳು ಧೈರ್ಯಶಾಲಿಗಳು’ – ನೀಟ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ

1 Min Read
1 Min Read

ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು “ಅತ್ಯಂತ ಗಂಭೀರವಾದ ಸಮಸ್ಯೆ” ಎಂದು ಬಣ್ಣಿಸಿರುವ ಅವರು, ವಿದ್ಯಾರ್ಥಿಗಳ ಹೋರಾಟವನ್ನು ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ಪ್ರತಿಭಟನೆ ಹಿಂಸಾತ್ಮಕ ತಿರುವು ಪಡೆದುಕೊಂಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಬಗ್ಗೆ ನನಗೆ ತುಂಬಾ ನೋವಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ಯುವಕರು ಒಂದಾಗಿ ಧ್ವನಿ ಎತ್ತಿರುವುದು ಹಾಗೂ ಅವರಿಗೆ ಪೋಷಕರು ಬೆಂಬಲ ನೀಡುತ್ತಿರುವುದು ಸಂತಸದ ಸಂಗತಿ” ಎಂದು ಅವರು ಹೇಳಿದ್ದಾರೆ.

ಆದರೆ, ವಿದ್ಯಾರ್ಥಿಗಳ ಪ್ರತಿಭಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಸಲ್ಮಾನ್ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ತೋರಿಸಿರುವ ಬದ್ಧತೆ, ಪ್ರಾಮಾಣಿಕತೆ ಹಾಗೂ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳುವ ಉತ್ಸಾಹ ಶ್ಲಾಘನೀಯ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಅವರು ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ನಿಜಕ್ಕೂ ಧೈರ್ಯಶಾಲಿಗಳು. ಶಿಕ್ಷಣದತ್ತ ಅವರ ಬದ್ಧತೆ ಭಾರತಕ್ಕೆ ಹೆಮ್ಮೆ ತರುವಂತಹದ್ದು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಸರ್ಕಾರವೂ ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ ಎಂಬ ವಿಶ್ವಾಸವಿದೆ. ಇದು ಎಲ್ಲರಿಗೂ ಗೆಲುವಿನ ಪರಿಸ್ಥಿತಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಕೊನೆಯಲ್ಲಿ, “ಭಾರತದಲ್ಲಿ ಶಿಕ್ಷಣವೇ ಒಂದು ಟ್ರೆಂಡ್ ಆಗಬೇಕು. ವಿದೇಶಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಲಿ” ಎಂದು ಸಲ್ಮಾನ್ ಖಾನ್ ಆಶಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹೃತಿಕ್ ರೋಷನ್, ಶಬಾನಾ ಆಜ್ಮಿ, ರಾಜ್‌ಕುಮಾರ್ ರಾವ್, ರಿತೇಶ್ ದೇಶ್‌ಮುಖ್, ಜೆನಿಲಿಯಾ ಡಿಸೂಜಾ, ನಸೀರುದ್ದೀನ್ ಶಾ, ರತ್ನಾ ಪಾಠಕ್ ಶಾ, ಅಭಯ್ ದಿಯೋಲ್, ಇಮ್ರಾನ್ ಖಾನ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವಾರು ಸಿನಿತಾರೆಯರು ಕೂಡ ನೀಟ್ ಪ್ರತಿಭಟನೆಯನ್ನು ಬೆಂಬಲಿಸಿದ್ದರು. ಖಾನ್ ಕುಟುಂಬದ ಪ್ರಮುಖ ನಟರಲ್ಲಿ ಈ ವಿಚಾರವಾಗಿ ಬಹಿರಂಗವಾಗಿ ಪ್ರತಿಕ್ರಿಯಿಸಿದ ಮೊದಲ ನಟ ಸಲ್ಮಾನ್ ಖಾನ್ ಎಂಬುದು ಗಮನಾರ್ಹ.

Share This Article