ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ ಭಾರತಕ್ಕೆ 4–1 ಭರ್ಜರಿ ಜಯ

1 Min Read
1 Min Read

ಜಲಂಧರ್: ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ನಿನ್ನೆ ಸಂಜೆ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 4–1 ಗೋಲುಗಳಿಂದ ಮಣಿಸಿದ ಭಾರತ, ಟೂರ್ನಿಯಲ್ಲಿ ಸತತ ಮೂರನೇ ಜಯ ದಾಖಲಿಸಿದೆ.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡಕ್ಕೆ ಅಭಿಷೇಕ್ ನೈನ್ ಪ್ರಮುಖ ಆಸರೆಯಾದರು. ಅವರು ಎರಡು ಫೀಲ್ಡ್ ಗೋಲುಗಳನ್ನು ದಾಖಲಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ಅಮೋಘ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ವಿಷ್ಣುಕಾಂತ್ ಸಿಂಗ್ ಒಂದು ಗೋಲು ಗಳಿಸಿದರೆ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದರೊಂದಿಗೆ ಅವರು ಈ ಟೂರ್ನಿಯಲ್ಲಿ ತಮ್ಮ ಐದನೇ ಗೋಲು ದಾಖಲಿಸಿದರು. ಜಪಾನ್ ಪರ ಶೋಟಾ ಯಮಡಾ ಪೆನಾಲ್ಟಿ ಸ್ಟ್ರೋಕ್ ಮೂಲಕ ಏಕೈಕ ಗೋಲು ಗಳಿಸಿದರು.

ಈ ಗೆಲುವಿನೊಂದಿಗೆ ಭಾರತ ತಂಡ ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಇಂದು ಟೂರ್ನಿಯಲ್ಲಿ ವಿಶ್ರಾಂತಿ ದಿನವಾಗಿದ್ದು, ನವೆಂಬರ್ 1ರಂದು ಭಾರತ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಇದೇ ದಿನ ದಕ್ಷಿಣ ಕೊರಿಯಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿದ್ದು, ಚೀನಾ ತಂಡ ಜಪಾನ್ ವಿರುದ್ಧ ಗೆದ್ದು ಟೂರ್ನಿಯಲ್ಲಿ ತನ್ನ ಮೊದಲ ಜಯ ದಾಖಲಿಸುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

Share This Article