ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಚೀನಾವನ್ನು 5-2 ಗೋಲುಗಳಿಂದ ಮಣಿಸಿದ ಭಾರತ

1 Min Read
1 Min Read

ಜಲಂಧರ್: ಪುರುಷರ ಹೀರೋ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಜಲಂಧರ್‌ನ ಒಲಿಂಪಿಯನ್ ಸುರಜಿತ್ ಸಿಂಗ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಲೀಗ್ ಪಂದ್ಯದಲ್ಲಿ ಚೀನಾ ತಂಡವನ್ನು 5-2 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಮತ್ತೊಂದು ಗೆಲುವು ದಾಖಲಿಸಿದೆ.

ಆಕ್ರಮಣಕಾರಿ ಆಟದ ಮೂಲಕ ಚೀನಾ ತಂಡ ಭಾರತಕ್ಕೆ ತೀವ್ರ ಪೈಪೋಟಿ ನೀಡಿದರೂ, ಆತಿಥೇಯ ತಂಡ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ ಗೆಲುವು ಸಾಧಿಸಿತು. ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಜುಗ್ರಾಜ್ ಸಿಂಗ್ ಕೂಡ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ಇನ್ನು ಸುಖ್‌ಜೀತ್ ಸಿಂಗ್ ಅದ್ಭುತ ಆಟದ ಮೂಲಕ ಎರಡು ಫೀಲ್ಡ್ ಗೋಲುಗಳನ್ನು ಗಳಿಸಿದರು. ಚೀನಾ ತಂಡ ತನ್ನ ಎರಡು ಗೋಲುಗಳನ್ನು ಪೆನಾಲ್ಟಿ ಕಾರ್ನರ್‌ಗಳ ಮೂಲಕ ದಾಖಲಿಸಿತು.

ಇದೇ ಕ್ರೀಡಾಂಗಣದಲ್ಲಿ ನಡೆದ ಇತರ ಪಂದ್ಯಗಳಲ್ಲಿ ಜಪಾನ್ ತಂಡ ಬಾಂಗ್ಲಾದೇಶವನ್ನು 1-0 ಗೋಲಿನಿಂದ ಸೋಲಿಸಿದರೆ, ಮಲೇಷ್ಯಾ ತಂಡ ದಕ್ಷಿಣ ಕೊರಿಯಾ ವಿರುದ್ಧ 3-1 ಗೋಲುಗಳ ಜಯ ಸಾಧಿಸಿತು.

ಇಂದಿನ ಪಂದ್ಯಗಳಲ್ಲಿ ಭಾರತ ಜಪಾನ್ ತಂಡವನ್ನು ಎದುರಿಸಲಿದೆ. ಮತ್ತೊಂದೆಡೆ ಬಾಂಗ್ಲಾದೇಶ ಮತ್ತು ಮಲೇಷ್ಯಾ ಮುಖಾಮುಖಿಯಾಗಲಿದ್ದು, ದಕ್ಷಿಣ ಕೊರಿಯಾ ತಂಡ ಚೀನಾ ವಿರುದ್ಧ ಸೆಣಸಲಿದೆ.

Share This Article