ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್: ಫೈನಲ್‌ಗೆ ಲಗ್ಗೆ ಇಟ್ಟ ಭಾರತದ ಪುರುಷ ಮತ್ತು ಮಹಿಳಾ ತಂಡಗಳು

1 Min Read
1 Min Read

ಅಹಮದಾಬಾದ್: ಚೊಚ್ಚಲ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಅಮೋಘ ಪ್ರದರ್ಶನ ನೀಡಿದ್ದು, ಎರಡೂ ತಂಡಗಳು ಫೈನಲ್‌ಗೆ ಪ್ರವೇಶಿಸಿವೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ.

ಮಹಿಳೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ 39–14 ಅಂಕಗಳ ಭರ್ಜರಿ ಜಯ ದಾಖಲಿಸಿತು. ಮೊದಲಾರ್ಧದಲ್ಲೇ 24–7 ಅಂಕಗಳ ಮುನ್ನಡೆ ಸಾಧಿಸಿದ್ದ ಭಾರತ, ಪಂದ್ಯದುದ್ದಕ್ಕೂ ತನ್ನ ಹಿಡಿತವನ್ನು ಕಾಯ್ದುಕೊಂಡು ಗೆಲುವು ಪಡೆಯಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಉಗಾಂಡಾ ತಂಡ ಕೀನ್ಯಾವನ್ನು 23–21 ಅಂಕಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆಯಿತು.

ಇಂದು ಸಂಜೆ 7.30ಕ್ಕೆ ನಡೆಯಲಿರುವ ಮಹಿಳೆಯರ ಫೈನಲ್‌ನಲ್ಲಿ ಭಾರತ ಮತ್ತು ಉಗಾಂಡಾ ತಂಡಗಳು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ಗುಂಪು ಹಂತದ ಪಂದ್ಯದಲ್ಲೂ ಭಾರತ ಉಗಾಂಡಾ ವಿರುದ್ಧ 41–18 ಅಂಕಗಳ ಅಂತರದಲ್ಲಿ ಜಯ ಸಾಧಿಸಿತ್ತು. ಇದೀಗ ಫೈನಲ್‌ನಲ್ಲಿಯೂ ಅದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.

ಇನ್ನು ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು 56–27 ಅಂಕಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡ ಕೀನ್ಯಾ ವಿರುದ್ಧ 28–24 ಅಂಕಗಳ ಜಯ ದಾಖಲಿಸಿತು.

ಇಂದು ರಾತ್ರಿ 9 ಗಂಟೆಗೆ ನಡೆಯಲಿರುವ ಪುರುಷರ ಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ. ಎರಡೂ ವಿಭಾಗಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಚೊಚ್ಚಲ ಕಾಮನ್‌ವೆಲ್ತ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡುವ ಗುರಿಯನ್ನು ಭಾರತೀಯ ಆಟಗಾರರು ಹೊಂದಿದ್ದಾರೆ.

Share This Article