ಬೆಂಗಳೂರು: ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಬೆಂಗಳೂರಿನ BEML ಘಟಕಕ್ಕೆ ಭೇಟಿ ನೀಡಿ, ಸ್ವದೇಶಿ ಹೈಸ್ಪೀಡ್ ರೈಲುಗಳ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ. ಈ ಸಂದರ್ಭದಲ್ಲಿ ಯೋಜನೆಯ ವಿವಿಧ ಹಂತಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಾಧ್ಯತೆಯಿದೆ.
ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲುಸೆಟ್ ಅನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿ ನಿರ್ಮಿಸಿರುವ BEML, ಇದೀಗ ದೇಶದ ಮುಂದಿನ ತಲೆಮಾರಿನ ಹೈಸ್ಪೀಡ್ ರೈಲುಗಳ ಅಭಿವೃದ್ಧಿಗೆ ಸಜ್ಜಾಗಿದೆ. ಬೆಂಗಳೂರಿನಲ್ಲಿರುವ BEMLನ ಅತ್ಯಾಧುನಿಕ ಆದಿತ್ಯ ರೈಲು ಸಂಕೀರ್ಣವು ಮುಂದಿನ ಪೀಳಿಗೆಯ ರೈಲುಗಳ ತಯಾರಿಕೆಯ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳುತ್ತಿದೆ.
ಮುಂಬೈ–ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ ಎರಡು ಸ್ವದೇಶಿ ಹೈಸ್ಪೀಡ್ ರೈಲುಸೆಟ್‌ಗಳ ವಿನ್ಯಾಸ, ತಯಾರಿಕೆ ಮತ್ತು ಕಾರ್ಯಾರಂಭದ ಜವಾಬ್ದಾರಿಯನ್ನು BEML ಮತ್ತು ಮೆಧಾ ಸರ್ವೋ ಡ್ರೈವ್ಸ್ ಒಳಗೊಂಡ ಒಕ್ಕೂಟ ಪಡೆದುಕೊಂಡಿದೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಈ ಯೋಜನೆಗೆ ₹866.87 ಕೋಟಿ ಮೌಲ್ಯದ ಗುತ್ತಿಗೆ ನೀಡಿದೆ.
ಈ ರೈಲು ಯೋಜನೆಗೆ B28 ಎಂದು ಹೆಸರಿಡಲಾಗಿದೆ. ಇದರ ವಿನ್ಯಾಸ ವೇಗ ಗಂಟೆಗೆ 280 ಕಿ.ಮೀ. ಆಗಿದ್ದು, ಕಾರ್ಯಾಚರಣೆಯ ವೇಗ ಗಂಟೆಗೆ 250 ಕಿ.ಮೀ. ಇರಲಿದೆ. ಈ ರೈಲು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0ರಿಂದ 100 ಕಿ.ಮೀ. ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿರಲಿದೆ ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ.
ಸಂಪೂರ್ಣವಾಗಿ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ರೂಪುಗೊಳ್ಳುತ್ತಿರುವ ಈ ಯೋಜನೆಯ ಪ್ರಮುಖ ಉದ್ದೇಶ ವಿದೇಶಿ, ವಿಶೇಷವಾಗಿ ಜಪಾನ್‌ನ ಶಿಂಕಾನ್ಸೆನ್ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ದೇಶೀಯವಾಗಿ ಹೈಸ್ಪೀಡ್ ರೈಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದಾಗಿದೆ. ಮೊದಲ ಮಾದರಿ ರೈಲುಸೆಟ್ ಅನ್ನು ಮುಂದಿನ ವರ್ಷದ ಆರಂಭದಲ್ಲಿ ಹೊರತರುವ ಗುರಿ ಹೊಂದಲಾಗಿದೆ.
ಇದರ ಜೊತೆಗೆ, ಭವಿಷ್ಯದ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಗಮನದಲ್ಲಿಟ್ಟುಕೊಂಡು ಗಂಟೆಗೆ 350 ಕಿ.ಮೀ. ವಿನ್ಯಾಸ ವೇಗ ಹೊಂದಿರುವ B35 ರೈಲುಸೆಟ್ ಅಭಿವೃದ್ಧಿಪಡಿಸುವ ಯೋಜನೆಯನ್ನೂ BEML ರೂಪಿಸಿದೆ. 2030ರ ವೇಳೆಗೆ ಇದನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದ್ದು, ದೆಹಲಿ–ವಾರಾಣಸಿ ಮತ್ತು ಹೈದರಾಬಾದ್–ಚೆನ್ನೈ ಮಾರ್ಗಗಳಂತಹ ಭವಿಷ್ಯದ ಯೋಜನೆಗಳಿಗೆ ಇದು ನೆರವಾಗುವ ನಿರೀಕ್ಷೆಯಿದೆ.


