‘ಟಾಕ್ಸಿಕ್’ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದೆ; ಯಶ್ ಚಿತ್ರದ ಕುರಿತು ಹುಮಾ ಖುರೇಷಿ ಮೆಚ್ಚುಗೆ

2 Min Read
2 Min Read

ಬೆಂಗಳೂರು: ಬಾಲಿವುಡ್ ನಟಿ ಹಾಗೂ ನಿರ್ಮಾಪಕಿ ಹುಮಾ ಖುರೇಷಿ ತಮ್ಮ ಹೊಸ ಚಿತ್ರ ‘Baby Do Die Do’ ವಿಶೇಷ ಪ್ರದರ್ಶನದ ಅಂಗವಾಗಿ ಬೆಂಗಳೂರಿಗೆ ಭೇಟಿ ನೀಡಿ, ಚಿತ್ರದ ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕುರಿತೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಹುಮಾ, “‘ಟಾಕ್ಸಿಕ್’ ಬಗ್ಗೆ ಇಂದು ಇಡೀ ಜಗತ್ತೇ ಮಾತನಾಡುತ್ತಿದೆ. ಆ ಚಿತ್ರದ ಮೇಲೆ ಎಲ್ಲೆಡೆ ಅಪಾರ ನಿರೀಕ್ಷೆಯಿದೆ,” ಎಂದು ಹೇಳಿದರು.

‘ಸಣ್ಣ ಸಿನಿಮಾ… ದೊಡ್ಡ ಹೃದಯ’

ತಮ್ಮ ಸಹೋದರ ಸಾಕಿಬ್ ಸಲೀಂ ಜೊತೆಗೂಡಿ ನಿರ್ಮಿಸಿರುವ ‘Baby Do Die Do’ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಕೋರಿದ ಅವರು,

“ಇದು ಸಣ್ಣ ಸಿನಿಮಾ ಆಗಿರಬಹುದು. ಆದರೆ ದೊಡ್ಡ ಹೃದಯದ ಕಥೆ ಹೊಂದಿದೆ. ನಿಮ್ಮ ಪ್ರೀತಿ ಮತ್ತು ಮೌಖಿಕ ಪ್ರಚಾರ (Word of Mouth) ನಮ್ಮ ಚಿತ್ರವನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲಿದೆ,” ಎಂದು ಮನವಿ ಮಾಡಿದರು.

ಮೂಕ-ಕಿವುಡ ಮಹಿಳೆಯ ಪಾತ್ರದಲ್ಲಿ ಹುಮಾ

ನಚಿಕೇತ್ ಸಾಮಂತ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಹುಮಾ ಮೂಕ ಮತ್ತು ಕಿವುಡ ಮಹಿಳೆಯ ಪಾತ್ರದಲ್ಲಿ ನಟಿಸಿದ್ದಾರೆ.

“ನನ್ನ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಗಳಲ್ಲಿ ಇದೂ ಒಂದು. ಸಾಮಾನ್ಯವಾಗಿ ನನ್ನ ಸಂಭಾಷಣೆಗಳಿಗಾಗಿ ಗುರುತಿಸಿಕೊಳ್ಳುತ್ತೇನೆ. ಆದರೆ ಈ ಸಿನಿಮಾದಲ್ಲಿ ನಾನು ಒಂದೇ ಒಂದು ಮಾತನ್ನೂ ಆಡಿಲ್ಲ. ದೇಹಭಾಷೆ ಮತ್ತು ಭಾವಾಭಿನಯದ ಮೂಲಕವೇ ಪಾತ್ರವನ್ನು ಜೀವಂತಗೊಳಿಸಬೇಕಾಯಿತು,” ಎಂದು ಅವರು ಹೇಳಿದರು.

ಈ ಪಾತ್ರಕ್ಕಾಗಿ ಸಂಜ್ಞಾ ಭಾಷೆ (Sign Language) ಪರಿಣಿತರ ಬಳಿ ತರಬೇತಿ ಪಡೆದಿದ್ದಲ್ಲದೆ, ವಿಶೇಷ ಅಗತ್ಯವಿರುವ ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರ ಸಂವಹನ ವಿಧಾನವನ್ನು ಅರ್ಥಮಾಡಿಕೊಂಡಿದ್ದಾಗಿ ಹುಮಾ ತಿಳಿಸಿದರು.

ಹೊಸ ಪ್ರಯೋಗಗಳೇ ಕಲಾವಿದನ ಬೆಳವಣಿಗೆ

ತಮ್ಮ ನಿರ್ಮಾಣದ ಆಯ್ಕೆಗಳ ಬಗ್ಗೆ ಮಾತನಾಡಿದ ಹುಮಾ,

“‘ಗ್ಯಾಂಗ್ಸ್ ಆಫ್ ವಾಸೇಪುರ್’ ನಂತರ ಪ್ರೇಕ್ಷಕರು ನನ್ನಿಂದ ಹೊಸ ಪ್ರಯೋಗಗಳನ್ನು ನಿರೀಕ್ಷಿಸುತ್ತಿದ್ದಾರೆ. ಒಬ್ಬ ಕಲಾವಿದನಾಗಿ ಒಂದೇ ರೀತಿಯ ಸಿನಿಮಾಗಳನ್ನು ಮಾಡುತ್ತಾ ಬೆಳೆಯಲು ಸಾಧ್ಯವಿಲ್ಲ. ಹೊಸ ಕಥೆಗಳು ಮತ್ತು ವಿಭಿನ್ನ ಪ್ರಯತ್ನಗಳೇ ಸಿನಿಮಾವನ್ನು ಮುಂದಕ್ಕೆ ಕೊಂಡೊಯ್ಯುತ್ತವೆ,” ಎಂದು ಹೇಳಿದರು.

ಈ ಚಿತ್ರವನ್ನು ಪೂರ್ಣಗೊಳಿಸಲು ಸುಮಾರು ನಾಲ್ಕು ವರ್ಷಗಳ ಕಾಲ ಹಿಡಿದಿದ್ದು, ನಂತರ ತಮ್ಮ ಸಹೋದರ ಹಾಗೂ ಚಿತ್ರತಂಡದ ಸಹಕಾರದಿಂದ ಸಿನಿಮಾ ಪೂರ್ಣಗೊಂಡಿದೆ ಎಂದರು.

ಯಶ್ ಹಾಗೂ ಗೀತು ಮೋಹನದಾಸ್‌ಗೆ ಧನ್ಯವಾದ

ತಮ್ಮ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸಿದ ಯಶ್ ಹಾಗೂ ನಿರ್ದೇಶಕಿ ಗೀತು ಮೋಹನದಾಸ್ ಅವರಿಗೆ ಹುಮಾ ವಿಶೇಷ ಕೃತಜ್ಞತೆ ಸಲ್ಲಿಸಿದರು.

“ನಮ್ಮಂತಹ ಸಣ್ಣ ಸಿನಿಮಾಕ್ಕೆ ಯಶ್ ಮತ್ತು ಗೀತು ಮೋಹನದಾಸ್ ಬೆಂಬಲ ನೀಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರ ಒಂದು ಪೋಸ್ಟ್‌ನಿಂದಲೇ ಬೆಂಗಳೂರಿನ ಪ್ರೇಕ್ಷಕರ ಗಮನ ನಮ್ಮ ಚಿತ್ರದತ್ತ ಸೆಳೆಯಿತು,” ಎಂದು ಅವರು ಹೇಳಿದರು.

Share This Article