ನವದೆಹಲಿ: ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಂತರ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಅಪರೂಪದ ‘ಸೆನ್ಸೊರಿನ್ಯೂರಲ್ ನರ್ವ್ ಹಿಯರಿಂಗ್ ಲಾಸ್’ (Sensorineural Hearing Loss) ಸಮಸ್ಯೆಗೆ ತುತ್ತಾಗಿದ್ದ ಅಲ್ಕಾ ಯಾಗ್ನಿಕ್, ಈ ಅವಧಿಯಲ್ಲಿ ಸಾರ್ವಜನಿಕ ಜೀವನ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದರು.
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ವೇದಿಕೆಯತ್ತ ಸಾಗುವಾಗ ಭದ್ರತಾ ಸಿಬ್ಬಂದಿಯ ನೆರವು ಪಡೆದ ದೃಶ್ಯಗಳು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದವು. ಇದರ ಬೆನ್ನಲ್ಲೇ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಲ್ಕಾ ಸ್ಪಷ್ಟನೆ ನೀಡಿದ್ದಾರೆ.
“ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣವನ್ನು ಸ್ವೀಕರಿಸುವ ಕ್ಷಣದಲ್ಲಿ ನನ್ನ ಹೃದಯ ಕೃತಜ್ಞತೆಯಿಂದ ತುಂಬಿತ್ತು. ಈ ಗೌರವ ನನ್ನೊಬ್ಬಳದ್ದಲ್ಲ; ನನ್ನ ಹಾಡುಗಳನ್ನು ಪ್ರೀತಿಸಿದ ಪ್ರತಿಯೊಬ್ಬ ಶ್ರೋತೃಗಳಿಗೂ ಸೇರಿದೆ. ನನ್ನ ಯಶಸ್ಸಿನ ಸಮಯದಲ್ಲೂ, ಸವಾಲಿನ ಸಂದರ್ಭದಲ್ಲೂ ನನ್ನೊಂದಿಗೆ ನಿಂತ ಎಲ್ಲರಿಗೂ ನಾನು ಋಣಿಯಾಗಿದ್ದೇನೆ,” ಎಂದು ಅವರು ಬರೆದುಕೊಂಡಿದ್ದಾರೆ.
ಅವರು ಮುಂದುವರಿದು, “ಈ ಗೌರವವು ಪ್ರೀತಿ, ಆಶಾವಾದ ಮತ್ತು ಆತ್ಮವಿಶ್ವಾಸದಿಂದ ಸಿಗುವ ಶಕ್ತಿಯ ನೆನಪನ್ನು ಮತ್ತೊಮ್ಮೆ ಮೂಡಿಸಿದೆ. ನಿಧಾನವಾಗಿ ನನ್ನ ಜೀವನದ ಹೊಸ ಅಧ್ಯಾಯವನ್ನು ಕಟ್ಟಿಕೊಳ್ಳುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.
2024ರಲ್ಲಿ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸಿದ್ದ ಅಲ್ಕಾ ಯಾಗ್ನಿಕ್, ವೈರಲ್ ಸೋಂಕಿನ ಪರಿಣಾಮ ಅಪರೂಪದ ಶ್ರವಣ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಿದ್ದರು. ಜೊತೆಗೆ ಅತಿಯಾದ ಶಬ್ದ, ಜೋರಾದ ಸಂಗೀತ ಮತ್ತು ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದ ದೂರ ಇರಲು ಜನರಿಗೆ ಸಲಹೆ ನೀಡಿದ್ದರು.
ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿರುವ ಅಲ್ಕಾ ಯಾಗ್ನಿಕ್, ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಕೋಲ್ಕತ್ತಾದ ಸಂಗೀತ ಪರಂಪರೆಯ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು.
‘ತೇಜಾಬ್’ ಚಿತ್ರದ ‘ಏಕ್ ದೋ ತೀನ್’, ‘ಖಲನಾಯಕ’ ಚಿತ್ರದ ‘ಚೋಲಿ ಕೆ ಪೀಚೆ’, ‘ಧಡ್ಕನ್’ ಚಿತ್ರದ ‘ದಿಲ್ ನೇ ಯೇ ಕಹಾ ಹೈ’, ‘ಹಮ್ ತುಮ್’, ‘ಕುಚ್ ಕುಚ್ ಹೋತಾ ಹೈ’ ಸೇರಿದಂತೆ ಅನೇಕ ಜನಪ್ರಿಯ ಹಾಡುಗಳ ಮೂಲಕ ಅವರು ಸಂಗೀತಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.


