ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಔಷಧಗಳಿಗೆ ಕೇಂದ್ರದ ಕಟ್ಟುನಿಟ್ಟಿನ ನಿಯಮ; ಡ್ರಗ್ಸ್ ರೂಲ್ಸ್‌ಗೆ ತಿದ್ದುಪಡಿ

1 Min Read
1 Min Read

ನವದೆಹಲಿ: ಹೆಚ್ಚಿನ ಪ್ರಮಾಣದಲ್ಲಿ ಎಥೈಲ್ ಆಲ್ಕೋಹಾಲ್ ಹೊಂದಿರುವ ಔಷಧಗಳ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಡ್ರಗ್ಸ್ ರೂಲ್ಸ್, 1945ಕ್ಕೆ ಮಹತ್ವದ ತಿದ್ದುಪಡಿ ಮಾಡಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಷೆಡ್ಯೂಲ್-ಕೆ (Schedule K) ಅಡಿಯಲ್ಲಿ ಇದುವರೆಗೆ ನೀಡಲಾಗಿದ್ದ ಪರವಾನಗಿ ವಿನಾಯಿತಿಯನ್ನು ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಔಷಧಗಳಿಗೆ ಇನ್ನು ಮುಂದೆ ಅನ್ವಯಿಸಲಾಗುವುದಿಲ್ಲ.

ಹೊಸ ನಿಯಮದಂತೆ, ಶೇ.12ಕ್ಕಿಂತ ಹೆಚ್ಚು (v/v) ಎಥೈಲ್ ಆಲ್ಕೋಹಾಲ್ ಹೊಂದಿರುವ ಹಾಗೂ 30 ಮಿಲಿಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ಔಷಧೀಯ ಉತ್ಪನ್ನಗಳು ಇನ್ನು ಮುಂದೆ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940ರಡಿ ಕಡ್ಡಾಯವಾಗಿ ಅಗತ್ಯ ಪರವಾನಗಿ ಪಡೆಯಬೇಕಾಗುತ್ತದೆ.

ಈ ಹಿಂದೆ ಏಲಕ್ಕಿ ಟಿಂಕ್ಚರ್, ಶುಂಠಿ ಟಿಂಕ್ಚರ್ ಹಾಗೂ ಇತರ ಸುಗಂಧಯುಕ್ತ ಔಷಧೀಯ ತಯಾರಿಕೆಗಳು ಸೇರಿದಂತೆ ಕೆಲವು ಉತ್ಪನ್ನಗಳಿಗೆ ಷೆಡ್ಯೂಲ್-ಕೆ ಅಡಿಯಲ್ಲಿ ಪರವಾನಗಿ ವಿನಾಯಿತಿ ನೀಡಲಾಗಿತ್ತು.

ಆದರೆ, ಈ ಔಷಧಗಳಲ್ಲಿ ಕೆಲವೊಂದು ಶೇ.80ರಿಂದ 90ರವರೆಗೆ ಎಥೈಲ್ ಆಲ್ಕೋಹಾಲ್ ಹೊಂದಿರುವುದರಿಂದ, ಅವುಗಳನ್ನು ಮಾದಕ ಉದ್ದೇಶಗಳಿಗೆ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುವುದನ್ನು ಸರ್ಕಾರ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ಮಾಡಿ, ಇಂತಹ ಔಷಧಗಳು ನಿಯಂತ್ರಿತ ಔಷಧ ವಿತರಣಾ ವ್ಯವಸ್ಥೆಯ ಮೂಲಕ ಮಾತ್ರ ಪೂರೈಕೆಯಾಗುವಂತೆ ಕ್ರಮ ಕೈಗೊಂಡಿದೆ.

ಈ ಹೊಸ ನಿಯಮದಿಂದ ಹೆಚ್ಚಿನ ಆಲ್ಕೋಹಾಲ್ ಅಂಶವಿರುವ ಔಷಧಗಳ ದುರುಪಯೋಗ ಮತ್ತು ಅನಧಿಕೃತ ಬಳಕೆಯನ್ನು ತಡೆಯಲು ನೆರವಾಗಲಿದ್ದು, ನಿಜವಾದ ಚಿಕಿತ್ಸಾ ಅಗತ್ಯಗಳಿಗೆ ಅವುಗಳ ಲಭ್ಯತೆಯನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಲು ಸಹಕಾರಿಯಾಗಲಿದೆ.

Share This Article