ನವದೆಹಲಿ: ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ದೀರ್ಘ ವ್ಯಾಪ್ತಿಯ ಭೂಮಿಯಿಂದ-ವಾಯುವಿಗೆ ಹೊಡೆಯುವ ‘ಕುಶಾ’ (Kusha) ಕ್ಷಿಪಣಿಯ ಮೊದಲ ಹಾರಾಟ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ರಕ್ಷಣಾ ಸಚಿವಾಲಯದ ಮಾಹಿತಿ ಪ್ರಕಾರ, ಒಡಿಶಾ ಕರಾವಳಿಯಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಿಂದ ಈ ಪರೀಕ್ಷೆಯನ್ನು ನಡೆಸಲಾಯಿತು. ಹೆಚ್ಚಿನ ವೇಗ ಮತ್ತು ಹೆಚ್ಚಿನ ಎತ್ತರದಲ್ಲಿ ಸಂಚರಿಸುವ ವೈಮಾನಿಕ ಗುರಿಯನ್ನು ಅನುಕರಿಸುವ ಎಲೆಕ್ಟ್ರಾನಿಕ್ ಗುರಿಯ ವಿರುದ್ಧ ಕ್ಷಿಪಣಿಯನ್ನು ಉಡಾಯಿಸಲಾಗಿದ್ದು, ‘ಕುಶಾ’ ಕ್ಷಿಪಣಿ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ.
ರಕ್ಷಣಾ ಸಚಿವಾಲಯದ ಪ್ರಕಾರ, ‘ಕುಶಾ’ ಕ್ಷಿಪಣಿ ವ್ಯವಸ್ಥೆ ಯುದ್ಧ ವಿಮಾನಗಳು, ವಿವಿಧ ರೀತಿಯ ಕ್ಷಿಪಣಿಗಳು, ಮಾನವರಹಿತ ವೈಮಾನಿಕ ವಾಹನಗಳು (UAV) ಹಾಗೂ ಶತ್ರುಗಳ ದೊಡ್ಡ ವಿಮಾನಗಳು ಸೇರಿದಂತೆ ವಿವಿಧ ವೈಮಾನಿಕ ಬೆದರಿಕೆಗಳನ್ನು ವಿಶಾಲ ವ್ಯಾಪ್ತಿ ಮತ್ತು ಎತ್ತರದಲ್ಲಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಸಾಧನೆಗಾಗಿ DRDO ವಿಜ್ಞಾನಿಗಳು ಹಾಗೂ ಯೋಜನೆಗೆ ಕೈಜೋಡಿಸಿದ ಎಲ್ಲರಿಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಯಶಸ್ಸು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
ದೀರ್ಘ ವ್ಯಾಪ್ತಿಯ ಭೂಮಿಯಿಂದ-ವಾಯುವಿಗೆ ಹೊಡೆಯುವ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ವಿಶ್ವದ ಕೆಲವೇ ರಾಷ್ಟ್ರಗಳಿಗೆ ಇದೆ. ಭಾರತವೂ ಇದೀಗ ಆ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕ್ಷಿಪಣಿ ವ್ಯವಸ್ಥೆಯಿಂದ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ಆಮದುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ದೇಶದ ವಾಯು ರಕ್ಷಣಾ ಸಾಮರ್ಥ್ಯವು ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


