ವಾಟ್ಸ್ಆ್ಯಪ್ ‘ಯೂಸರ್‌ನೇಮ್’ ವೈಶಿಷ್ಟ್ಯಕ್ಕೆ ಕೇಂದ್ರದ ಪರಿಶೀಲನೆ; ಮೆಟಾದಿಂದ ಉತ್ತರ ಸಲ್ಲಿಕೆ

1 Min Read
1 Min Read

ನವದೆಹಲಿ: ಭಾರತದಲ್ಲಿ ವಾಟ್ಸ್ಆ್ಯಪ್ (WhatsApp) ನಲ್ಲಿ ‘ಯೂಸರ್‌ನೇಮ್’ (Usernames) ವೈಶಿಷ್ಟ್ಯ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಕೇಳಿದ್ದ ಸ್ಪಷ್ಟೀಕರಣಕ್ಕೆ, ಮೆಟಾ (Meta) ಒಡೆತನದ ಸಾಮಾಜಿಕ ಜಾಲತಾಣ ಸಂಸ್ಥೆ ತನ್ನ ಅಧಿಕೃತ ಉತ್ತರವನ್ನು ಸಲ್ಲಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಮೂಲಗಳ ಪ್ರಕಾರ, ಮೆಟಾದ ಉತ್ತರ ನಿನ್ನೆ ರಾತ್ರಿ ಸಚಿವಾಲಯಕ್ಕೆ ತಲುಪಿದ್ದು, ಅಧಿಕಾರಿಗಳು ಅದರ ಪರಿಶೀಲನೆ ನಡೆಸುತ್ತಿದ್ದಾರೆ.

ಈ ತಿಂಗಳ 1ರಂದು, ಭಾರತದಲ್ಲಿ Usernames ವೈಶಿಷ್ಟ್ಯ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮೆಟಾಗೆ ನೋಟಿಸ್ ಜಾರಿ ಮಾಡಿತ್ತು. ಈ ಹೊಸ ವೈಶಿಷ್ಟ್ಯದ ಕಾರ್ಯವಿಧಾನ, ಬಳಕೆದಾರರ ಗೌಪ್ಯತೆ ಹಾಗೂ ಭದ್ರತೆಗೆ ಸಂಬಂಧಿಸಿದ ಅಂಶಗಳ ಕುರಿತು ಸಮಗ್ರ ವಿವರಣೆ ನೀಡುವಂತೆ ಸಚಿವಾಲಯ ಸೂಚಿಸಿತ್ತು.

ಇದರ ಜೊತೆಗೆ, ಈ ವಿಷಯದ ಕುರಿತು ಸರ್ಕಾರದೊಂದಿಗೆ ನಡೆಯುತ್ತಿರುವ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ‘ಯೂಸರ್‌ನೇಮ್’ ವೈಶಿಷ್ಟ್ಯವನ್ನು ಜಾರಿಗೊಳಿಸಬಾರದು ಎಂದು ಮೆಟಾಗೆ ನಿರ್ದೇಶನ ನೀಡಲಾಗಿತ್ತು.

ಸದ್ಯ ಮೆಟಾ ಸಲ್ಲಿಸಿರುವ ಉತ್ತರವನ್ನು ಸಚಿವಾಲಯ ಪರಿಶೀಲಿಸುತ್ತಿದ್ದು, ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Share This Article