ದೇಶದ ವಿದ್ಯುತ್ ಬೇಡಿಕೆಯ 50%ಕ್ಕೂ ಹೆಚ್ಚು ಪೂರೈಸಿದ ಶುದ್ಧ ಇಂಧನ; ಪ್ರಲ್ಹಾದ್ ಜೋಶಿ ಸಂತಸ

1 Min Read
1 Min Read

ನವದೆಹಲಿ: ಭಾರತದ ಶುದ್ಧ ಇಂಧನ (Clean Energy) ಕ್ಷೇತ್ರ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ದೇಶದ ಒಟ್ಟು ವಿದ್ಯುತ್ ಬೇಡಿಕೆಯ ಶೇ.50ಕ್ಕೂ ಹೆಚ್ಚು ಭಾಗವನ್ನು ನವೀಕರಿಸಬಹುದಾದ ಇಂಧನ ಮೂಲಗಳು ಪೂರೈಸಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, ಈ ತಿಂಗಳ 6ರಂದು ದೇಶದ ಒಟ್ಟು ವಿದ್ಯುತ್ ಪೂರೈಕೆಯಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳ ಪಾಲು ಶೇ.50.2ಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ಇದು ದೇಶದ ವಿದ್ಯುತ್ ಬೇಡಿಕೆಯಲ್ಲಿ ಶುದ್ಧ ಇಂಧನವು ಶೇ.50ಕ್ಕಿಂತ ಹೆಚ್ಚು ಪಾಲು ಹೊಂದಿರುವ ಎರಡನೇ ಸಂದರ್ಭವಾಗಿದ್ದು, ಭಾರತದ ಹಸಿರು ಇಂಧನ ಕ್ಷೇತ್ರದ ವೇಗದ ಬೆಳವಣಿಗೆಗೆ ಇದು ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತದ ಶುದ್ಧ ಇಂಧನ ಪರಿಸರ ವ್ಯವಸ್ಥೆ (Clean Energy Ecosystem) ದಿನದಿಂದ ದಿನಕ್ಕೆ ಮತ್ತಷ್ಟು ಬಲಿಷ್ಠ ಮತ್ತು ವಿಶ್ವಾಸಾರ್ಹವಾಗುತ್ತಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಸುಸ್ಥಿರ ಅಭಿವೃದ್ಧಿಯ ಗುರಿಯತ್ತ ವೇಗವಾಗಿ ಸಾಗುತ್ತಿದ್ದು, ಸೌರ, ಪವನ ಹಾಗೂ ಇತರ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ನಿರಂತರವಾಗಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.

ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು, ಇಂಧನ ಭದ್ರತೆಯನ್ನು ಬಲಪಡಿಸುವುದು ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿಗೆ ಉತ್ತೇಜನ ನೀಡುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಸಚಿವರು ತಿಳಿಸಿದರು.

Share This Article