ನವದೆಹಲಿ: ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಬಟ್ಟೆಯ ಚೀಲ, ಮರುಬಳಕೆ ಮಾಡಬಹುದಾದ ಬಾಟಲಿಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರು ಇಂದು ಎರಡು ವಾರಗಳ ‘ಸ್ವಚ್ಛತಾ ಪಖ್ವಾಡಾ-2026’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ರಸಗೊಬ್ಬರ ಇಲಾಖೆ ಆಯೋಜಿಸಿರುವ ಈ ರಾಷ್ಟ್ರಮಟ್ಟದ ಅಭಿಯಾನವು ಮುಂದಿನ ತಿಂಗಳ 15ರವರೆಗೆ ನಡೆಯಲಿದೆ. ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಒತ್ತು ನೀಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಭೌತಿಕ ಸ್ವಚ್ಛತೆಯ ಜೊತೆಗೆ ಡಿಜಿಟಲ್ ಸ್ವಚ್ಛತೆ
ಈ ಬಾರಿಯ ಸ್ವಚ್ಛತಾ ಪಖ್ವಾಡಾದಲ್ಲಿ ಕಚೇರಿಗಳ ಭೌತಿಕ ಸ್ವಚ್ಛತೆಗೆ ಮಾತ್ರ ಸೀಮಿತವಾಗದೆ ಡಿಜಿಟಲ್ ಸ್ವಚ್ಛತೆ ಮತ್ತು ದಾಖಲೆ ನಿರ್ವಹಣೆಗೂ ವಿಶೇಷ ಆದ್ಯತೆ ನೀಡಲಾಗಿದೆ.
ಡಿಜಿಟಲ್ ಕಾರ್ಯವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಆಡಳಿತದ ದಕ್ಷತೆ, ಪಾರದರ್ಶಕತೆ ಮತ್ತು ಕೆಲಸದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಇಲಾಖೆ ಹೊಂದಿದೆ.
ಇ-ಕಚೇರಿ ವ್ಯವಸ್ಥೆ ಮತ್ತಷ್ಟು ಸುಧಾರಣೆ
ಅಭಿಯಾನದ ಅಂಗವಾಗಿ ರಸಗೊಬ್ಬರ ಇಲಾಖೆಯ ಇ-ಆಫೀಸ್ ಹಾಗೂ ಡಿಜಿಟಲ್ ಕಡತ ವ್ಯವಸ್ಥೆಯನ್ನು ವ್ಯವಸ್ಥಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತದೆ.
ಇ-ಆಫೀಸ್‌ನಲ್ಲಿ ಬಾಕಿ ಉಳಿದಿರುವ ಇ-ಕಡತಗಳನ್ನು ಪರಿಶೀಲಿಸುವುದು, ವಿಲೇವಾರಿಯಾದ ಪ್ರಕರಣಗಳ ಕಡತಗಳನ್ನು ಡಿಜಿಟಲ್ ರೂಪದಲ್ಲಿ ಮುಚ್ಚುವುದು ಅಥವಾ ಆರ್ಕೈವ್ ಮಾಡುವುದು ಹಾಗೂ ವಿವಿಧ ಡೇಟಾಬೇಸ್‌ಗಳನ್ನು ವ್ಯವಸ್ಥಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಇದರಿಂದ ಕಚೇರಿ ಕಾರ್ಯವೈಖರಿಯಲ್ಲಿ ಅನಗತ್ಯ ವಿಳಂಬ ಕಡಿಮೆಯಾಗುವುದರ ಜೊತೆಗೆ ದಾಖಲೆಗಳ ನಿರ್ವಹಣೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಪರಿಸರ ಸಂರಕ್ಷಣೆಗೆ ಜನರ ಸಹಭಾಗಿತ್ವ
ಏಕಬಳಕೆಯ ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಹಾನಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಟ್ಟೆಯ ಚೀಲಗಳು ಮತ್ತು ಮರುಬಳಕೆ ಮಾಡಬಹುದಾದ ಬಾಟಲಿಗಳ ಬಳಕೆಗೆ ಅಭಿಯಾನದಲ್ಲಿ ಉತ್ತೇಜನ ನೀಡಲಾಗುತ್ತಿದೆ.
ಭೌತಿಕ ಸ್ವಚ್ಛತೆ, ಪರಿಸರ ಕಾಳಜಿ ಮತ್ತು ಡಿಜಿಟಲ್ ಕಾರ್ಯನಿರ್ವಹಣೆಯ ಸುಧಾರಣೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮೂಲಕ ಸ್ವಚ್ಛತಾ ಪಖ್ವಾಡಾ-2026 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದೆ.


