ಲೇಹ್: ವಿಶ್ವಪ್ರಸಿದ್ಧ ಪಶ್ಮೀನಾ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಹಾಗೂ ಚಾಂಗ್ಪಾ ಪಶುಪಾಲಕ ಸಮುದಾಯದ ಜೀವನೋಪಾಯ ಸುಧಾರಿಸುವ ಉದ್ದೇಶದಿಂದ ಲಡಾಖ್ ಆಡಳಿತ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಲಡಾಖ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ನೂತನವಾಗಿ ರಚನೆಯಾದ ಲಡಾಖ್ ಪಶ್ಮೀನಾ ಅಭಿವೃದ್ಧಿ ಮಂಡಳಿಯ ಮೊದಲ ಸಭೆಯಲ್ಲಿ ಎರಡು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
ಇದರಡಿ, ದೇಶದಲ್ಲೇ ಮೊದಲ ಬಾರಿಗೆ ಪಶುಸಂಪತ್ತು ಅಭಿವೃದ್ಧಿ ಪ್ರೋತ್ಸಾಹ ಯೋಜನೆ ಜಾರಿಯಾಗಲಿದ್ದು, ಕಚ್ಚಾ ಪಶ್ಮೀನಾ ಮಾರಾಟ ಮಾಡುವ ಪಶುಪಾಲಕರಿಗೆ ಖರೀದಿ ಮೌಲ್ಯದ ಮೇಲೆ ಹೆಚ್ಚುವರಿ 25 ಶೇಕಡಾ ಪ್ರೋತ್ಸಾಹಧನವನ್ನು ನೇರ ಲಾಭ ವರ್ಗಾವಣೆ (DBT) ಮೂಲಕ ನೀಡಲಾಗುತ್ತದೆ.
ಇದಲ್ಲದೆ, ಆಲ್ ಚಾಂಗ್ತಾಂಗ್ ಪಶ್ಮೀನಾ ಗ್ರೋವರ್ಸ್ ಸಹಕಾರ ಮಾರುಕಟ್ಟೆ ಸಂಘಕ್ಕೆ ₹8 ಕೋಟಿ ಮೊತ್ತದ ಆವರ್ತಕ ನಿಧಿ (Revolving Fund) ಮಂಜೂರು ಮಾಡಲಾಗಿದೆ. ಇದರ ಮೂಲಕ ಕಚ್ಚಾ ಪಶ್ಮೀನಾವನ್ನು ಸಮಯಕ್ಕೆ ಸರಿಯಾಗಿ ಖರೀದಿಸಿ, ಪಶುಪಾಲಕರಿಗೆ ವಿಳಂಬವಿಲ್ಲದೆ ಹಣ ಪಾವತಿಸಲು ನೆರವಾಗಲಿದೆ.
ಮುಂದಿನ ಮೂರು ವರ್ಷಗಳಲ್ಲಿ ಪಶ್ಮೀನಾ ಮೇಕೆಗಳ ಸಂಖ್ಯೆಯನ್ನು 4 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಮಂಡಳಿ ನಿಗದಿಪಡಿಸಿದೆ. ಜೊತೆಗೆ ಕಚ್ಚಾ ಪಶ್ಮೀನಾ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಲಡಾಖ್‌ನ ಪಶ್ಮೀನಾ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಸ್ಪರ್ಧಾತ್ಮಕವಾಗಿಸುವ ಉದ್ದೇಶ ಹೊಂದಿದೆ.
ಈ ಕ್ರಮಗಳಿಂದ ಲಡಾಖ್‌ನ ಪಶ್ಮೀನಾ ಕ್ಷೇತ್ರಕ್ಕೆ ಹೊಸ ಚೈತನ್ಯ ದೊರೆಯಲಿದ್ದು, ಚಾಂಗ್ಪಾ ಸಮುದಾಯದ ಆದಾಯ ಮತ್ತು ಜೀವನಮಟ್ಟ ಸುಧಾರಣೆಗೆ ಮಹತ್ವದ ನೆರವಾಗಲಿದೆ.


