ಗೋವಾ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣ: ₹1,023 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

1 Min Read
1 Min Read

ನವದೆಹಲಿ: ಗೋವಾದ ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದ್ದು, ಸುಮಾರು ₹1,023 ಕೋಟಿ ಮೌಲ್ಯದ ಆಸ್ತಿಗಳನ್ನು ಅಟ್ಯಾಚ್ ಮಾಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA), 2002ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇಡಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಜಪ್ತಿ ಮಾಡಲಾದ ಆಸ್ತಿಗಳು ದಿವಂಗತ ಅನಿಲ್ ವಾಸುದೇವ್ ಸಲ್ಗಾವ್ಕರ್ ಅವರ ಎಸ್ಟೇಟ್ ಹಾಗೂ ಸಲ್ಗಾವ್ಕರ್ ಮೈನಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಸಂಬಂಧಿತ ಕಂಪನಿಗಳ ಹೆಸರಿನಲ್ಲಿ ನೋಂದಾಯಿತವಾಗಿವೆ.

ಗೋವಾ ಸಿಐಡಿ ಕ್ರೈಂ ಬ್ರಾಂಚ್ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ತನಿಖೆ ಆರಂಭಿಸಲಾಗಿತ್ತು. 2014 ಮತ್ತು 2018ರಲ್ಲಿ ನೀಡಿದ್ದ ತೀರ್ಪುಗಳಲ್ಲಿ, 2007ರ ನವೆಂಬರ್ 22ರ ನಂತರ ಗೋವಾದಲ್ಲಿ ನಡೆದ ಎಲ್ಲಾ ಗಣಿಗಾರಿಕೆ ಚಟುವಟಿಕೆಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂದು ಇಡಿ ಉಲ್ಲೇಖಿಸಿದೆ.

ತನಿಖೆಯ ವೇಳೆ ಸುಮಾರು ₹5,237.84 ಕೋಟಿ ಮೌಲ್ಯದ ಅಕ್ರಮ ಆದಾಯ (Proceeds of Crime) ಸೃಷ್ಟಿಯಾಗಿರುವ ಶಂಕೆ ವ್ಯಕ್ತವಾಗಿದೆ. 2007ರಿಂದ 2012ರ ಅವಧಿಯಲ್ಲಿ 10 ಗಣಿಗಾರಿಕೆ ಲೀಸ್ ಪ್ರದೇಶಗಳಿಂದ ಕಾನೂನುಬಾಹಿರವಾಗಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿ ಸುಮಾರು ₹2,492.95 ಕೋಟಿ ಆದಾಯ ಗಳಿಸಲಾಗಿದೆ ಎಂದು ಇಡಿ ಆರೋಪಿಸಿದೆ.

ಇದಲ್ಲದೆ, ವಿದೇಶದಲ್ಲಿರುವ ಶೆಲ್ ಕಂಪನಿಗಳಿಗೆ ಕಡಿಮೆ ದರದಲ್ಲಿ ಕಬ್ಬಿಣದ ಅದಿರು ಮಾರಾಟ ಮಾಡುವ ಮೂಲಕ ಸುಮಾರು ₹2,744 ಕೋಟಿ ಹೆಚ್ಚುವರಿ ಅಕ್ರಮ ಲಾಭ ಗಳಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹಣಕಾಸು ವ್ಯವಹಾರಗಳು ಮತ್ತು ಆಸ್ತಿ ವಿವರಗಳ ಪರಿಶೀಲನೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ ಎಂದು ಇಡಿ ತಿಳಿಸಿದೆ.

Share This Article
Leave a Comment