ಭೋಪಾಲ್: ಮಧ್ಯಪ್ರದೇಶ ಪೊಲೀಸರ ‘ನಶೇ ಸೆ ದೂರಿ ಹೈ ಜರುರಿ 2.0’ (Nashe Se Doori Hai Jaruri 2.0) ಅಭಿಯಾನವು ಮಾದಕ ವ್ಯಸನ ವಿರೋಧಿ ಜಾಗೃತಿ ಮೂಡಿಸುವಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದೆ.
ಇಂದೋರ್ ಪೊಲೀಸ್ ಆಯುಕ್ತಾಲಯ ಆಯೋಜಿಸಿದ್ದ ಈ ಅಭಿಯಾನದಲ್ಲಿ 1,75,451 ಮಂದಿ ಏಕಕಾಲದಲ್ಲಿ ಆನ್‌ಲೈನ್ ಮೂಲಕ ಮಾದಕ ವ್ಯಸನ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದ್ದು, ಈ ಸಾಧನೆಗೆ ವಿಶ್ವ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ಮಾನ್ಯತೆ ನೀಡಿದೆ.
ವಿದ್ಯಾರ್ಥಿಗಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜೂಮ್, ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈ ಬೃಹತ್ ಆನ್‌ಲೈನ್ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ಅವರು ಪೊಲೀಸ್ ಆಯುಕ್ತರ ಕಚೇರಿಯಿಂದಲೇ ಪ್ರತಿಜ್ಞೆ ಬೋಧಿಸಿ, ಮಾದಕ ವ್ಯಸನದಿಂದ ದೂರವಿರುವಂತೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.
ಕಳೆದ ವರ್ಷ ಇದೇ ಅಭಿಯಾನದಲ್ಲಿ 85,003 ಮಂದಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದರು. ಈ ಬಾರಿ ಪಾಲ್ಗೊಂಡವರ ಸಂಖ್ಯೆ ಎರಡರಷ್ಟು ಹೆಚ್ಚಾಗಿ 1.75 ಲಕ್ಷಕ್ಕೂ ಅಧಿಕ ತಲುಪಿದ್ದು, ಹೊಸ ವಿಶ್ವದಾಖಲೆ ನಿರ್ಮಾಣವಾಗಿದೆ.


