ಪಾಂಜಿ ಹಗರಣದ ತನಿಖೆ: ಜಪ್ತಿ ಮಾಡಿದ್ದ ಹಕ್ಕರ್ 800A ವಿಮಾನ ₹3 ಕೋಟಿಗೆ ಹರಾಜು

1 Min Read
1 Min Read

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಜಪ್ತಿ ಮಾಡಲಾಗಿದ್ದ ಹಕ್ಕರ್ 800A (Hawker 800A) ವಿಮಾನವನ್ನು ಜಾರಿ ನಿರ್ದೇಶನಾಲಯ (ED) ₹3 ಕೋಟಿಗೆ ಹರಾಜು ಮಾಡಿದೆ.

ಇಡಿ ಪ್ರಕಟಣೆ ಪ್ರಕಾರ, ಎಂಎಸ್‌ಟಿಸಿ (MSTC) ಲಿಮಿಟೆಡ್ ಮೂಲಕ ಈ ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ವಿಮಾನವನ್ನು ಕಳೆದ ವರ್ಷ ಮಾರ್ಚ್ 7ರಂದು ನಡೆದ ಶೋಧ ಕಾರ್ಯಾಚರಣೆಯ ವೇಳೆ ಜಪ್ತಿ ಮಾಡಲಾಗಿತ್ತು.

ಹೈದರಾಬಾದ್ ವಲಯ ಕಚೇರಿಯ ಅಧಿಕಾರಿಗಳು, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವಿಮಾನವನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಅಮರ್‌ದೀಪ್ ಕುಮಾರ್, ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿದೆ.

ತನಿಖೆಯಲ್ಲಿ, ಆರೋಪಿಗಳು ಇನ್ವಾಯ್ಸ್ ಡಿಸ್ಕೌಂಟಿಂಗ್ ಯೋಜನೆ ಹೆಸರಿನಲ್ಲಿ ಹೆಚ್ಚಿನ ಲಾಭದ ಭರವಸೆ ನೀಡಿ ₹792 ಕೋಟಿ ಮೌಲ್ಯದ ಪಾಂಜಿ ಹೂಡಿಕೆ ವಂಚನೆ ನಡೆಸಿ ಸಾವಿರಾರು ಹೂಡಿಕೆದಾರರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಇಡಿ ತಿಳಿಸಿದೆ.

ವಿಮಾನ ಹರಾಜಿನಿಂದ ಬಂದ ₹3 ಕೋಟಿ ಮೊತ್ತವನ್ನು, ಪಿಎಂಎಲ್‌ಎ ಕಾಯ್ದೆ-2002ರ ನಿಯಮಗಳ ಪ್ರಕಾರ ನೈಜ ಹೂಡಿಕೆದಾರರಿಗೆ ಪರಿಹಾರ (Restitution) ನೀಡಲು ಬಳಸಲಾಗುತ್ತದೆ ಎಂದು ಇಡಿ ಸ್ಪಷ್ಟಪಡಿಸಿದೆ.

ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

Share This Article
Leave a Comment