ಕೋಲ್ಕತ್ತಾ: ರಾಷ್ಟ್ರೀಯ ಶಿಕ್ಷಣ ನೀತಿ (NEP)–2020ಗೆ ಅನುಗುಣವಾಗಿ ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೊಸ ಪಠ್ಯಕ್ರಮ (ಸಿಲೆಬಸ್) ಜಾರಿಗೆ ತರುವುದಾಗಿ ಘೋಷಿಸಿದೆ.
ರಾಜ್ಯದ 1ರಿಂದ 12ನೇ ತರಗತಿವರೆಗೆ ಹೊಸ ಪಠ್ಯಕ್ರಮವನ್ನು 2028ರಿಂದ ಜಾರಿಗೆ ತರಲಾಗುವುದು. ಇದಕ್ಕೂ ಮುನ್ನ 2027ರಲ್ಲಿ ಪಠ್ಯಕ್ರಮದಲ್ಲಿ ಅಗತ್ಯ ಪರಿಷ್ಕರಣೆಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೋಲ್ಕತ್ತಾದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಮಾಹಿತಿ ನೀಡಿದ ಪಶ್ಚಿಮ ಬಂಗಾಳದ ಶಾಲಾ ಶಿಕ್ಷಣ ಸಚಿವ ದೀಪಕ್ ಬರ್ಮನ್, ಹೊಸ ಪಠ್ಯಕ್ರಮ ರೂಪಿಸಲು ರಚಿಸಲಾದ ಸಿಲೆಬಸ್ ಸಮಿತಿಯು ಈಗಾಗಲೇ ತನ್ನ ಕಾರ್ಯವನ್ನು ಆರಂಭಿಸಿದೆ ಎಂದು ಹೇಳಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಈ ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು.


