ಗ್ಯಾಂಗ್ಟಾಕ್: ಅಗ್ನಿವೀರರಿಗೆ ಸೇನಾ ಸೇವೆಯ ಬಳಿಕ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಿಕ್ಕಿಂ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅರಣ್ಯ ರಕ್ಷಕ (Forest Guard) ಹುದ್ದೆಗಳ ನೇಮಕಾತಿಯಲ್ಲಿ 20 ಶೇಕಡಾ ಮೀಸಲಾತಿ ಘೋಷಿಸಿದೆ.
ಗ್ಯಾಂಗ್ಟಾಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಘೋಷಣೆ ಮಾಡಿದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಗೋಲೇ, ಸಶಸ್ತ್ರ ಪಡೆಗಳಲ್ಲಿ ಸೇವೆ ಪೂರ್ಣಗೊಳಿಸಿ ಮರಳುವ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ತಮಾಂಗ್ ಅವರು, ಸಿಕ್ಕಿಂ ಪೊಲೀಸ್ ಇಲಾಖೆಯ ನೇಮಕಾತಿಯಲ್ಲೂ ಈಗಾಗಲೇ ಅಗ್ನಿವೀರರಿಗೆ 20 ಶೇಕಡಾ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರವು ಮಾಜಿ ಸೈನಿಕರು ಹಾಗೂ ಅಗ್ನಿವೀರರ ಪುನರ್ವಸತಿ ಮತ್ತು ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಬದ್ಧವಾಗಿದೆ ಎಂದು ಅವರು ಹೇಳಿದರು. ಅವರ ಸೇವೆಗೆ ಗೌರವ ಸೂಚಿಸುವ ಜೊತೆಗೆ, ನಾಗರಿಕ ಜೀವನದಲ್ಲಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಅಗತ್ಯ ಬೆಂಬಲ ನೀಡುವ ಉದ್ದೇಶದಿಂದ ಇಂತಹ ಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಸೇನೆ ಸೇವೆ ಪೂರ್ಣಗೊಳಿಸಿದ ಅಗ್ನಿವೀರರಿಗೆ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ರಾಜ್ಯಗಳ ಪೈಕಿ ಸಿಕ್ಕಿಂ ಕೂಡ ಮಹತ್ವದ ಹೆಜ್ಜೆ ಇಟ್ಟಿದೆ.


