₹20 ಲಕ್ಷ ಕೋಟಿ ದಾಟಿದ GeM ವಹಿವಾಟು: ಭಾರತದ ಡಿಜಿಟಲ್ ಆಡಳಿತದ ಆಧಾರಸ್ತಂಭವಾಗಿ ಬೆಳವಣಿಗೆ

2 Min Read
2 Min Read

ನವದೆಹಲಿ: ಭಾರತದ ಸರ್ಕಾರಿ ಖರೀದಿ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮತ್ತಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿಸಿರುವ ಸರ್ಕಾರಿ ಇ-ಮಾರ್ಕೆಟ್‌ಪ್ಲೇಸ್ (GeM), ಕಳೆದ ಒಂದು ದಶಕದಲ್ಲಿ ಮಹತ್ವದ ಸಾಧನೆ ಮಾಡಿದೆ. GeMನಲ್ಲಿ ಒಟ್ಟು ಸರಕು ಮತ್ತು ಸೇವೆಗಳ ವಹಿವಾಟಿನ ಮೌಲ್ಯ (GMV) ₹20 ಲಕ್ಷ ಕೋಟಿಗೂ ಅಧಿಕವಾಗಿದೆ ಎಂದು GeM ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮಿಹಿರ್ ಕುಮಾರ್ ತಿಳಿಸಿದ್ದಾರೆ.

2016ರ ಆಗಸ್ಟ್ 9ರಂದು ಆರಂಭಗೊಂಡ GeM, ತಂತ್ರಜ್ಞಾನ, ಪಾರದರ್ಶಕತೆ, ಕಾರ್ಯಕ್ಷಮತೆ ಮತ್ತು ಉತ್ತಮ ಆಡಳಿತದ ಮೂಲಕ ಸರ್ಕಾರಿ ಖರೀದಿ ವ್ಯವಸ್ಥೆಯನ್ನು ಪರಿವರ್ತಿಸುವ ಉದ್ದೇಶ ಹೊಂದಿದೆ.

ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಿಹಿರ್ ಕುಮಾರ್, 2016-17ರಲ್ಲಿ ಕೇವಲ ₹422 ಕೋಟಿ ಇದ್ದ GeMನ ವ್ಯವಹಾರವು ಇದೀಗ ₹20 ಲಕ್ಷ ಕೋಟಿಗೂ ಮೀರಿದೆ ಎಂದು ತಿಳಿಸಿದರು. ಕಳೆದ 10 ವರ್ಷಗಳಲ್ಲಿ GeM ಭಾರತದ ಡಿಜಿಟಲ್ ಆಡಳಿತ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭವಾಗಿ ಬೆಳೆದಿದೆ ಎಂದರು.

ಇತರೆ ಇ-ಕಾಮರ್ಸ್ ವೇದಿಕೆಗಳಿಗಿಂತ ಕಡಿಮೆ ಬೆಲೆ

ಐಐಟಿ ದೆಹಲಿ ನಡೆಸಿದ ಅಧ್ಯಯನದ ಪ್ರಕಾರ, ಇತರೆ ಪ್ರಮುಖ ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಇಂಡಿಯಾಮಾರ್ಟ್‌ಗಳಿಗೆ ಹೋಲಿಸಿದರೆ GeMನಲ್ಲಿ ಮಾರಾಟವಾದ ಶೇ.74ರಷ್ಟು ಉತ್ಪನ್ನಗಳ ಬೆಲೆ ಕಡಿಮೆ ಇತ್ತು ಎಂದು ಮಿಹಿರ್ ಕುಮಾರ್ ಮಾಹಿತಿ ನೀಡಿದರು.

GeMನಲ್ಲಿ ನೋಂದಾಯಿಸಿಕೊಂಡಿರುವ ಮಾರಾಟಗಾರರ ಸಂಖ್ಯೆಯಲ್ಲಿಯೂ ಗಮನಾರ್ಹ ಏರಿಕೆಯಾಗಿದೆ. ಆರಂಭದಲ್ಲಿ ಸುಮಾರು 3,000 ಇದ್ದ ಮಾರಾಟಗಾರರ ಸಂಖ್ಯೆ ಇದೀಗ 25 ಲಕ್ಷಕ್ಕೂ ಅಧಿಕವಾಗಿದೆ.

ಅದೇ ರೀತಿ, GeMನಲ್ಲಿ ನೋಂದಾಯಿಸಿಕೊಂಡಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ (MSEs) ಸಂಖ್ಯೆಯೂ ಸುಮಾರು 2,000ರಿಂದ 12 ಲಕ್ಷಕ್ಕೂ ಅಧಿಕಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

ಎಲ್ಲಾ ರಾಜ್ಯಗಳೂ GeM ವ್ಯಾಪ್ತಿಗೆ

ದೇಶದ ಎಲ್ಲಾ ರಾಜ್ಯಗಳು ಈಗಾಗಲೇ GeM ವೇದಿಕೆಯಲ್ಲಿ ಸೇರ್ಪಡೆಯಾಗಿವೆ. ಮುಂದಿನ ಹಂತದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳನ್ನೂ GeM ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಿಹಿರ್ ಕುಮಾರ್ ಹೇಳಿದರು.

ಸರ್ಕಾರಿ ಖರೀದಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ GeMನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.

Share This Article