ಹೈದರಾಬಾದ್: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರಕ್ಕೆ ತೆಲಂಗಾಣ ಸರ್ಕಾರ ತಾತ್ಕಾಲಿಕ ಟಿಕೆಟ್ ದರ ಏರಿಕೆಗೆ ಅನುಮತಿ ನೀಡಿದೆ. ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗುವ ಒಂದು ದಿನ ಮುನ್ನ ಈ ಆದೇಶ ಹೊರಬಿದ್ದಿದೆ.
ತೆಲಂಗಾಣ ಸರ್ಕಾರದ ಆದೇಶದಂತೆ ಆಗಸ್ಟ್ 26ರಿಂದ ಸೆಪ್ಟೆಂಬರ್ 4ರವರೆಗೆ 10 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪರಿಷ್ಕೃತ ಟಿಕೆಟ್ ದರ ವಿಧಿಸಲು ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಚಿತ್ರಮಂದಿರಗಳು ದಿನಕ್ಕೆ ಗರಿಷ್ಠ ಐದು ಪ್ರದರ್ಶನಗಳನ್ನು ನಡೆಸಬಹುದು.
ರಾಜ್ಯ ಗೃಹ ಇಲಾಖೆಯ ಆದೇಶದ ಪ್ರಕಾರ, ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಪ್ರತಿ ಟಿಕೆಟ್‌ಗೆ ₹50 ಹೆಚ್ಚುವರಿ ಶುಲ್ಕ ವಿಧಿಸಬಹುದು. ಈ ಮೊತ್ತದಲ್ಲಿ ಜಿಎಸ್‌ಟಿ ಸೇರಿದೆ. ಮಲ್ಟಿಪ್ಲೆಕ್ಸ್‌ಗಳು ಹಾಗೂ ವಿಶೇಷ ಪರದೆಗಳಲ್ಲಿ ಪ್ರತಿ ಟಿಕೆಟ್‌ಗೆ ₹100 ಹೆಚ್ಚುವರಿ ದರ ವಿಧಿಸಲು ಅನುಮತಿ ನೀಡಲಾಗಿದೆ.
ನಿರ್ಮಾಪಕರಿಗೆ ₹1 ಕೋಟಿ ಪಾವತಿ ಷರತ್ತು
ಟಿಕೆಟ್ ದರ ಏರಿಕೆಗೆ ಅನುಮತಿ ನೀಡಿರುವ ತೆಲಂಗಾಣ ಸರ್ಕಾರ, ಚಿತ್ರದ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್‌ಗೆ ₹1 ಕೋಟಿ ಪಾವತಿಸುವಂತೆ ಸೂಚಿಸಿದೆ.
ಈ ಮೊತ್ತವನ್ನು ತೆಲುಗು ಚಿತ್ರರಂಗದ ಉದ್ಯೋಗಿಗಳ ಕಲ್ಯಾಣ ಸಮಿತಿ ನಿಧಿಗೆ ನೀಡಬೇಕಿದೆ. ಚಿತ್ರರಂಗದ ಕಾರ್ಮಿಕರು ಹಾಗೂ ತಂತ್ರಜ್ಞರ ಕಲ್ಯಾಣಕ್ಕಾಗಿ ಈ ನಿಧಿಯನ್ನು ಬಳಸಲಾಗುತ್ತದೆ.
ಇದರ ಜತೆಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭಕ್ಕೂ ಮುನ್ನ ಹಾಗೂ ಮಧ್ಯಂತರದಲ್ಲಿ ಮಾದಕವಸ್ತು ವಿರೋಧಿ ಜಾಗೃತಿ ಮತ್ತು ಸೈಬರ್ ಅಪರಾಧ ತಡೆಗೆ ಸಂಬಂಧಿಸಿದ ಸಾರ್ವಜನಿಕ ಸೇವಾ ಜಾಹೀರಾತುಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡುವಂತೆ ಸರ್ಕಾರ ಸೂಚಿಸಿದೆ.
ಹೈದರಾಬಾದ್‌ನಲ್ಲಿ ‘ಟಾಕ್ಸಿಕ್’ಗೆ ಭರ್ಜರಿ ಮುಂಗಡ ಬುಕ್ಕಿಂಗ್
ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ತೆಲುಗು ರಾಜ್ಯಗಳಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹೀಗಾಗಿ ಹೈದರಾಬಾದ್ ಸೇರಿದಂತೆ ತೆಲಂಗಾಣದಾದ್ಯಂತ ‘ಟಾಕ್ಸಿಕ್’ ಚಿತ್ರದ ಮುಂಗಡ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಿರುವ ಚಿತ್ರವು ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಆಗಸ್ಟ್ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ತೆರೆಕಾಣಲಿದೆ.


