ಶ್ರೀನಗರ: ವಾರ್ಷಿಕ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿರುವ ಉತ್ತರ ರೈಲ್ವೆ, ಜನಪ್ರಿಯ ವಿಸ್ಟಾಡೋಮ್ ವಿಶೇಷ ರೈಲು ಸೇವೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿದೆ.
ಇಂದಿನಿಂದ ಆಗಸ್ಟ್ 31, 2026ರವರೆಗೆ ಅಥವಾ ಮುಂದಿನ ಆದೇಶದವರೆಗೆ ಕಾತ್ರಾ–ಬುದ್ಗಾಂ ನಡುವಿನ ವಿಸ್ಟಾಡೋಮ್ ವಿಶೇಷ ರೈಲು ಸಂಪೂರ್ಣ ಮಾರ್ಗದಲ್ಲಿ ಸಂಚರಿಸುವುದಿಲ್ಲ. ಈ ಅವಧಿಯಲ್ಲಿ ರೈಲು ಬನಿಹಾಲ್–ಬುದ್ಗಾಂ ನಡುವೆಯಷ್ಟೇ ಸಂಚರಿಸಲಿದೆ.
ಅಮರನಾಥ ಯಾತ್ರೆಯ ವೇಳೆ ಭಕ್ತರ ಸುರಕ್ಷಿತ ಸಂಚಾರ, ಜನಸಂದಣಿ ನಿಯಂತ್ರಣ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸುಗಮಗೊಳಿಸುವ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನೀಡಿದ ಭದ್ರತಾ ಸಲಹೆ ಹಾಗೂ ಶಿಫಾರಸುಗಳ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಾಶ್ಮೀರ ಕಣಿವೆಯ ನೈಸರ್ಗಿಕ ಸೌಂದರ್ಯವನ್ನು ಗಾಜಿನ ಮೇಲ್ಛಾವಣಿ ಮತ್ತು ಕಿಟಕಿಗಳ ಮೂಲಕ ವೀಕ್ಷಿಸಲು ಅವಕಾಶ ನೀಡುವ ವಿಸ್ಟಾಡೋಮ್ ವಿಶೇಷ ರೈಲು ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಅಮರನಾಥ ಯಾತ್ರೆ ಮುಕ್ತಾಯವಾದ ಬಳಿಕ ಪರಿಸ್ಥಿತಿಯನ್ನು ಪರಿಶೀಲಿಸಿ, ಪೂರ್ಣ ಪ್ರಮಾಣದ ರೈಲು ಸೇವೆ ಪುನರಾರಂಭಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು.


