ಅಮರನಾಥ ಯಾತ್ರೆಗೆ ಕೌಂಟ್‌ಡೌನ್: ಜುಲೈ 2ರಂದು ಮೊದಲ ತಂಡ ರವಾನೆ

1 Min Read
1 Min Read

ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆ ಹಿನ್ನೆಲೆಯಲ್ಲಿ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಸುಮಾರು 55 ಸಾವಿರ ಯಾತ್ರಿಕರಿಗೆ ವಸತಿ, ಭದ್ರತೆ, ಆರೋಗ್ಯ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಜುಲೈ 2ರಂದು ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್ನಿಂದ ಮೊದಲ ಭಕ್ತರ ತಂಡವನ್ನು ಬೆಳಿಗ್ಗೆ 4 ಗಂಟೆಗೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹಾಗೂ ಶ್ರೀ ಅಮರನಾಥ ಶ್ರೈನ್ ಬೋರ್ಡ್ (SASB) ಅಧ್ಯಕ್ಷ ಮನೋಜ್ ಸಿನ್ಹಾ ಅವರು ಹಸಿರು ನಿಶಾನೆ ತೋರಿಸಿ ರವಾನಿಸಲಿದ್ದಾರೆ.

ಒಟ್ಟು 57 ದಿನಗಳ ಈ ಯಾತ್ರೆ ಜುಲೈ 3ರಿಂದ ಆರಂಭವಾಗಲಿದ್ದು, ಸಾಂಪ್ರದಾಯಿಕ ನುನ್ವಾನ್-ಪಹಲ್ಗಾಮ್ ಮಾರ್ಗ (ಅನಂತನಾಗ್ ಜಿಲ್ಲೆ) ಹಾಗೂ ಬಾಲ್ತಾಲ್ ಮಾರ್ಗ (ಗಂದೇರ್‌ಬಲ್ ಜಿಲ್ಲೆ) ಮೂಲಕ ಭಕ್ತರು ಪವಿತ್ರ ಗುಹೆಗೆ ತೆರಳಲಿದ್ದಾರೆ.

ಯಾತ್ರಿಕರ ಅನುಕೂಲಕ್ಕಾಗಿ ವಸತಿ, ಅನ್ನಸಂತರ್ಪಣೆ, ಸಾರಿಗೆ, ಆರೋಗ್ಯ ಸೇವೆ, ಸ್ವಚ್ಛತೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ. ಯಾತ್ರಾ ಮಾರ್ಗದಲ್ಲಿ ಸುಮಾರು 2,100 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಭಕ್ತರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH-44) ಮೂಲಕವೇ ಪ್ರಯಾಣಿಸಬೇಕು ಎಂದು ಆಡಳಿತ ಸೂಚಿಸಿದೆ. ಮುಗಲ್ ರಸ್ತೆ ಹಾಗೂ ಧಾರ್ ರಸ್ತೆ ಮೂಲಕ ಯಾತ್ರಿಕರ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ಲಖನ್‌ಪುರದಿಂದ ಬನಿಹಾಲ್‌ವರೆಗೆ ವಸತಿ ಕೇಂದ್ರಗಳು, ಲಂಗರ್‌ಗಳು, ತಾತ್ಕಾಲಿಕ ಆಶ್ರಯ ಕೇಂದ್ರಗಳು ಹಾಗೂ ವೈದ್ಯಕೀಯ ನೆರವಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

Share This Article
Leave a Comment