ಭಾರತ-ಗ್ರೀಸ್ ಆರ್ಥಿಕ ಬಾಂಧವ್ಯಕ್ಕೆ ಹೊಸ ವೇಗ; ಪಿಯೂಷ್ ಗೋಯಲ್ ಮಹತ್ವದ ಮಾತುಕತೆ
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗ್ರೀಸ್ ಪ್ರವಾಸದ ವೇಳೆ ಉಭಯ ದೇಶಗಳ ನಡುವಿನ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದರು.
ಗ್ರೀಸ್‌ನ ಆರ್ಥಿಕ ಮತ್ತು ಹಣಕಾಸು ಸಚಿವ ಕಿರಿಯಾಕೋಸ್ ಪಿಯೆರಾಕಾಕಿಸ್ ಅವರನ್ನು ಭೇಟಿಯಾದ ಗೋಯಲ್, ಹಣಕಾಸು ಸೇವೆಗಳು, ಫಿನ್‌ಟೆಕ್, ಡಿಜಿಟಲ್ ಪಾವತಿ ವ್ಯವಸ್ಥೆಗಳು ಹಾಗೂ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಬಗ್ಗೆ ಚರ್ಚಿಸಿದರು.
ಇದೇ ವೇಳೆ, ಭಾರತ ಮತ್ತು ಗ್ರೀಸ್‌ನ ಸರ್ಕಾರಿ ಸಂಸ್ಥೆಗಳು ಹಾಗೂ ಉದ್ಯಮ ವಲಯಗಳ ನಡುವೆ ಇನ್ನಷ್ಟು ಸಹಭಾಗಿತ್ವ ಬೆಳೆಸಿ ಪರಸ್ಪರ ಸಮೃದ್ಧಿಗೆ ಉತ್ತೇಜನ ನೀಡುವ ಸಾಧ್ಯತೆಗಳ ಕುರಿತೂ ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ನಂತರ ಗ್ರೀಸ್‌ನ ಮೂಲಸೌಕರ್ಯ ಮತ್ತು ಸಾರಿಗೆ ಸಚಿವ ಕ್ರಿಸ್ಟೋಸ್ ಡಿಮಾಸ್ ಅವರನ್ನು ಭೇಟಿಯಾದ ಪಿಯೂಷ್ ಗೋಯಲ್, ಮೂಲಸೌಕರ್ಯ ಅಭಿವೃದ್ಧಿ, ಸಾರಿಗೆ ಸಂಪರ್ಕ, ಸಾಗರೋದ್ಯಮ, ವಿಮಾನಯಾನ ಹಾಗೂ ಸುಸ್ಥಿರ ಸಂಚಾರ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸುವ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಭಾರತ ಮತ್ತು ಯುರೋಪ್ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು, ಸ್ಥಿರ ಹಾಗೂ ವಿಶ್ವಾಸಾರ್ಹ ಪೂರೈಕೆ ಸರಪಳಿ (Supply Chain) ನಿರ್ಮಾಣಕ್ಕೆ ಪರಸ್ಪರ ಸಹಕಾರವನ್ನು ವಿಸ್ತರಿಸುವ ಆಶಯವನ್ನು ಪಿಯೂಷ್ ಗೋಯಲ್ ವ್ಯಕ್ತಪಡಿಸಿದರು.


