ಉತ್ತರ ಅಮೆರಿಕಾ, ಯುಕೆ, ಯುರೋಪ್ ಮತ್ತು ಆಸ್ಟ್ರೇಲಿಯಾಕ್ಕೆ ಸುಗಮ ಪ್ರಯಾಣ; ಶ್ರೀ ಗುರು ರಾಮದಾಸ್ ಜೀ ವಿಮಾನ ನಿಲ್ದಾಣದಲ್ಲಿ ಸೇವೆಗೆ ಚಾಲನೆ

1 Min Read
1 Min Read

ಅಮೃತಸರ: ಪಂಜಾಬ್‌ನ ಅಂತರರಾಷ್ಟ್ರೀಯ ವಿಮಾನ ಸಂಪರ್ಕಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶದಿಂದ ಏರ್ ಇಂಡಿಯಾ ತನ್ನ ‘ಈಸಿ ಕನೆಕ್ಟ್’ (Easy Connect) ಹಬ್-ಆ್ಯಂಡ್-ಸ್ಪೋಕ್ (Hub-and-Spoke) ಸೇವೆಯನ್ನು ಅಮೃತಸರದ ಶ್ರೀ ಗುರು ರಾಮದಾಸ್ ಜೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭಿಸಿದೆ.

ಈ ಸೇವೆಯ ಮೂಲಕ ಪಂಜಾಬ್‌ನಿಂದ ಉತ್ತರ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ (ಯುಕೆ), ಯುರೋಪ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ 27 ಜಾಗತಿಕ ತಾಣಗಳಿಗೆ ಸುಲಭ ಸಂಪರ್ಕ ಕಲ್ಪಿಸಲಾಗಿದೆ.

ಸೇವೆಗೆ ಚಾಲನೆ ನೀಡಿ ಮಾತನಾಡಿದ ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ, ಇದು ವಿಮಾನಯಾನ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಮಹತ್ವದ ಉಪಕ್ರಮವಾಗಿದ್ದು, ರಾಜ್ಯದಿಂದ ವಿದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಈ ಯೋಜನೆಯಡಿ ಅಮೃತಸರದಿಂದ ಪ್ರತಿದಿನ ಎರಡು ‘ಈಸಿ ಕನೆಕ್ಟ್’ ವಿಮಾನಗಳು ಸಂಚಾರ ಆರಂಭಿಸಿವೆ.

ಈ ಸೇವೆಯನ್ನು ಬಳಸುವ ಪ್ರಯಾಣಿಕರು ಸುಗಮ ಪ್ರಯಾಣಕ್ಕಾಗಿ ವಿಮಾನ ಹಾರಾಟಕ್ಕೂ ಮುನ್ನ ಹಾಗೂ ಟ್ರಾನ್ಸಿಟ್ ವೇಳೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ವಿಶೇಷವಾಗಿ, ಅಂತರರಾಷ್ಟ್ರೀಯ ಸಂಪರ್ಕ ಹೊಂದಿರುವ ಈಸಿ ಕನೆಕ್ಟ್ ವಿಮಾನಗಳಲ್ಲಿ ಪ್ರಯಾಣಿಸುವ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರಿಗೆ ‘ಡಿಜಿಯಾತ್ರಾ’ (DigiYatra) ನೋಂದಣಿ ಕಡ್ಡಾಯವಾಗಿದೆ.

ಏರ್ ಇಂಡಿಯಾದ ವೆಬ್‌ಸೈಟ್, ಮೊಬೈಲ್ ಆ್ಯಪ್, ಸಂಪರ್ಕ ಕೇಂದ್ರ ಹಾಗೂ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಈಸಿ ಕನೆಕ್ಟ್ ವಿಮಾನಗಳ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಲಭ್ಯವಿದೆ.

Share This Article