ನವದೆಹಲಿ: ಭಾರತ–ಯುನೈಟೆಡ್ ಕಿಂಗ್ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ (Agreement on Social Security) ಜಾರಿಗೆ ಬಂದಿರುವುದನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಈ ಎರಡೂ ಒಪ್ಪಂದಗಳು ಭಾರತ ಮತ್ತು ಬ್ರಿಟನ್ ನಡುವಿನ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಮಹತ್ವದ ಮೈಲಿಗಲ್ಲಾಗಿವೆ ಎಂದು ಹೇಳಿದ್ದಾರೆ.
ಈ ಒಪ್ಪಂದಗಳು ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುವುದರ ಜೊತೆಗೆ, ವ್ಯಾಪಾರ ಮತ್ತು ಸೇವಾ ವಲಯವನ್ನು ಮತ್ತಷ್ಟು ಬಲಪಡಿಸಲಿವೆ ಹಾಗೂ ವೃತ್ತಿಪರರ ಮುಕ್ತ ಸಂಚಾರಕ್ಕೂ ಉತ್ತೇಜನ ನೀಡಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದರ ಮೂಲಕ ಉದ್ಯಮಿಗಳು, ರೈತರು, ತಯಾರಕರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME), ನುರಿತ ಕಾರ್ಮಿಕರು ಹಾಗೂ ಸ್ಟಾರ್ಟ್ಅಪ್ಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಜವಳಿ, ಚರ್ಮ ಉತ್ಪನ್ನಗಳು, ರತ್ನ ಮತ್ತು ಆಭರಣ, ಎಂಜಿನಿಯರಿಂಗ್ ಉತ್ಪನ್ನಗಳು, ಸಮುದ್ರ ಆಹಾರ, ರಾಸಾಯನಿಕಗಳು ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತಿಗೆ ಈ ಒಪ್ಪಂದ ಹೆಚ್ಚಿನ ಉತ್ತೇಜನ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಭಾರತ–ಬ್ರಿಟನ್ ಸಂಬಂಧಗಳಲ್ಲಿ ಆರಂಭವಾಗಿರುವ ಈ ಹೊಸ ಅಧ್ಯಾಯವು ಸಮೃದ್ಧಿ, ನಾವೀನ್ಯತೆ ಹಾಗೂ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡುವುದರ ಜೊತೆಗೆ ಉಭಯ ರಾಷ್ಟ್ರಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬ ವಿಶ್ವಾಸವನ್ನು ಉಪರಾಷ್ಟ್ರಪತಿ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾರತ–ಯುಕೆ ಮುಕ್ತ ವ್ಯಾಪಾರ ಒಪ್ಪಂದವನ್ನು ಸ್ವಾಗತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಈ ಒಪ್ಪಂದವು ಜವಳಿ, ಚರ್ಮ ಉತ್ಪನ್ನಗಳು, ಎಂಜಿನಿಯರಿಂಗ್, ಆಹಾರ ಸಂಸ್ಕರಣೆ, ಔಷಧೋದ್ಯಮ ಹಾಗೂ MSME ಸೇರಿದಂತೆ ಕಾರ್ಮಿಕ ಆಧಾರಿತ ಕೈಗಾರಿಕೆಗಳಿಗೆ ಹೊಸ ಅವಕಾಶಗಳನ್ನು ತೆರೆದಿಡಲಿದೆ ಎಂದು ಹೇಳಿದ್ದಾರೆ.
ಭಾರತದ 99 ಶೇಕಡಾ ರಫ್ತು ಉತ್ಪನ್ನಗಳಿಗೆ ಬ್ರಿಟನ್ನಲ್ಲಿ ಸುಂಕಮುಕ್ತ (Zero Duty) ಮಾರುಕಟ್ಟೆ ಪ್ರವೇಶ ದೊರೆಯಲಿದ್ದು, ಇದು ದೇಶದ ರಫ್ತು ವಲಯಕ್ಕೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಜೊತೆಗೆ, ಯುಕೆಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ವೃತ್ತಿಪರರಿಗೆ ಮಹತ್ವದ ಸಾಮಾಜಿಕ ಭದ್ರತಾ ವಿನಾಯಿತಿಗಳು ದೊರೆಯಲಿದ್ದು, ಈ ಒಪ್ಪಂದವು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


