ಭಾರತದ ನೆರವಿನಿಂದ ಮಂಗೋಲಿಯಾದ ಡೋರ್ನೊಗೋವಿಯಲ್ಲಿ ನಿರ್ಮಾಣವಾಗುತ್ತಿರುವ ತೈಲ ಶುದ್ಧೀಕರಣ ಘಟಕದ ಪ್ರಗತಿಗೆ ಮಂಗೋಲಿಯಾದ ಮಾಜಿ ಅಧ್ಯಕ್ಷ ಹಾಗೂ ಆಡಳಿತಾರೂಢ ಮಂಗೋಲಿಯನ್ ಪೀಪಲ್ಸ್ ಪಾರ್ಟಿ (MPP) ನಾಯಕ ನಂಬರಿನ್ ಎನ್‌ಖ್‌ಬಯಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1.7 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತ ಸರ್ಕಾರದ ಸಾಲಸೌಲಭ್ಯದ (Line of Credit) ನೆರವಿನಿಂದ ನಿರ್ಮಾಣವಾಗುತ್ತಿರುವ ಮಂಗೋಲ್ ಆಯಿಲ್ ರಿಫೈನರಿ ಯೋಜನೆ ಮಂಗೋಲಿಯಾದ ಸುಸ್ಥಿರ ಇಂಧನ ನೀತಿಯ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
ಮಂಗೋಲಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಭಾರತ ರಾಯಭಾರಿ ಅತುಲ್ ಮಲ್ಹಾರಿ ಗೊಟ್ಸುರ್ವೆ ಅವರು ಮಾಜಿ ಅಧ್ಯಕ್ಷ ಎನ್‌ಖ್‌ಬಯಾರ್ ಅವರೊಂದಿಗೆ ಡೋರ್ನೊಗೋವಿ ಜಿಲ್ಲೆಯ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ Engineers India Limited (EIL), Megha Engineering and Infrastructures Limited (MEIL) ಹಾಗೂ Mongol Refinery ಸಂಸ್ಥೆಗಳ ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಾಯಿತು.
ಯೋಜನೆಯ ಪ್ರಗತಿಯನ್ನು ಶ್ಲಾಘಿಸಿದ ಎನ್‌ಖ್‌ಬಯಾರ್, ಈ ಮೆಗಾ ಯೋಜನೆ ಮಂಗೋಲಿಯಾದ ಇಂಧನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಭಾರತ–ಮಂಗೋಲಿಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


