ನವದೆಹಲಿ: ಭಾರತ–ಯುನೈಟೆಡ್ ಕಿಂಗ್‌ಡಮ್ (ಯುಕೆ) ನಡುವಿನ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (CETA) ಹಾಗೂ ಸಾಮಾಜಿಕ ಭದ್ರತಾ ಒಪ್ಪಂದ (Social Security Agreement) ಇಂದಿನಿಂದ ಜಾರಿಗೆ ಬಂದಿರುವುದು ಉಭಯ ರಾಷ್ಟ್ರಗಳ ಪಾಲುದಾರಿಕೆಯಲ್ಲಿ ಮಹತ್ವದ ಘಟ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಈ ಒಪ್ಪಂದವು ಭಾರತದ ರೈತರು, ಉದ್ಯಮಿಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSME) ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಉತ್ಪನ್ನಗಳಿಗೆ ಬ್ರಿಟನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರವೇಶ ದೊರೆಯಲಿದ್ದು, ರಫ್ತು ವೃದ್ಧಿಗೆ ಈ ಒಪ್ಪಂದ ಮಹತ್ವದ ಕೊಡುಗೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ತಂತ್ರಜ್ಞಾನ, ವೃತ್ತಿಪರ ಸೇವೆಗಳು ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಭಾರತ–ಬ್ರಿಟನ್ ಸಹಕಾರ ಮತ್ತಷ್ಟು ಗಟ್ಟಿಯಾಗಲಿದ್ದು, ನುರಿತ ಭಾರತೀಯ ವೃತ್ತಿಪರರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳು ಸಿಗಲಿವೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಭದ್ರತಾ ಒಪ್ಪಂದದಿಂದ ಯುಕೆಯಲ್ಲಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುವ ಭಾರತೀಯ ವೃತ್ತಿಪರರಿಗೆ ಮಹತ್ವದ ನೆರವು ದೊರೆಯಲಿದ್ದು, ಭಾರತೀಯ ಉದ್ಯಮಗಳ ಜಾಗತಿಕ ಸ್ಪರ್ಧಾತ್ಮಕತೆಯೂ ಹೆಚ್ಚಲಿದೆ ಎಂದು ಮೋದಿ ಹೇಳಿದ್ದಾರೆ.
ಈ ಒಪ್ಪಂದವು ಭಾರತ ಮತ್ತು ಬ್ರಿಟನ್ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ಪರಸ್ಪರ ವಿಶ್ವಾಸದ ಪ್ರತೀಕವಾಗಿದ್ದು, ವ್ಯಾಪಾರ, ತಂತ್ರಜ್ಞಾನ, ಹೂಡಿಕೆ ಹಾಗೂ ನಾವೀನ್ಯತೆಯ ಆಧಾರದ ಮೇಲೆ ಭವಿಷ್ಯೋನ್ಮುಖ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಭಾರತ ಮತ್ತು ಬ್ರಿಟನ್ ಪರಸ್ಪರ ಸಮೃದ್ಧಿ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಮುಂದೆಯೂ ಒಟ್ಟಾಗಿ ಕಾರ್ಯನಿರ್ವಹಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


