ನವದೆಹಲಿ: ವಿಕ್ರಮ್-1 ಉಡಾವಣೆಯ ಯಶಸ್ಸಿನ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಹ-ಸಂಸ್ಥಾಪಕರಾದ ಪವನ್ ಚಂದನಾ ಮತ್ತು ನಾಗ ಭರತ್ ಡಾಕಾ ಅವರೊಂದಿಗೆ ಸಂವಾದ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮ್ಮ ಮಾತುಕತೆಯಲ್ಲಿ ವಿಕ್ರಮ್-1 ಯಶಸ್ಸು ಪ್ರಮುಖ ವಿಷಯವಾಗಿದ್ದು, ಅದರ ಜೊತೆಗೆ ಸಂಸ್ಥೆಯ ಬೆಳವಣಿಗೆಯ ಪಯಣ ಹಾಗೂ ಭವಿಷ್ಯದ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಕೈರೂಟ್ ಸಂಸ್ಥಾಪಕರ ಉದ್ಯಮಶೀಲ ಪಯಣ ಮತ್ತು ಮುಂದಿನ ಗುರಿಗಳ ಬಗ್ಗೆ ತಿಳಿದು ಸಂತಸವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಅವರ ಉತ್ಸಾಹ, ಮಹತ್ವಾಕಾಂಕ್ಷೆ ಮತ್ತು ಸಕಾರಾತ್ಮಕ ಮನೋಭಾವವು ಭಾರತದ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಭವಿಷ್ಯದ ಯೋಜನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದ ಪ್ರಧಾನಿ, ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯ ಸಂಪೂರ್ಣ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.


