ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದಿನಿಂದ ಮೂರು ದಿನಗಳ ಪಶ್ಚಿಮ ಬಂಗಾಳ ಪ್ರವಾಸವನ್ನು ಆರಂಭಿಸಿದ್ದಾರೆ. ಈ ಅವಧಿಯಲ್ಲಿ ಗಡಿ ಭದ್ರತೆ, ಆಡಳಿತ, ಕಾನೂನು ಸುವ್ಯವಸ್ಥೆ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.
ಮೂಲಗಳ ಪ್ರಕಾರ, ಶುಕ್ರವಾರ ಅಮಿತ್ ಶಾ ಅವರು ಸಿಲಿಗುರಿಯ ಜುಮಾಗಾಚ್ ಗಡಿ ಹೊರಠಾಣೆಗೆ (Border Outpost) ಭೇಟಿ ನೀಡಿ, ಬಿಎಸ್‌ಎಫ್‌ನ 18ನೇ ಬಟಾಲಿಯನ್ ಗಡಿ ಹೊರಠಾಣೆಯ ಯೋಧರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ಗಡಿ ಭದ್ರತೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ಪಶ್ಚಿಮ ಬಂಗಾಳದ ಗಡಿ ಸಂಬಂಧಿತ ವಿಷಯಗಳ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಲಿರುವ ಅಮಿತ್ ಶಾ, ಗಡಿ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಇದೇ ವೇಳೆ, ರಾಜ್ಯದಲ್ಲಿ ಜಾರಿಯಲ್ಲಿರುವ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನದ ಪ್ರಗತಿಯನ್ನು ಕೂಡ ಅವರು ಪರಿಶೀಲಿಸಲಿದ್ದಾರೆ. ಕಾನೂನು ಜಾರಿ, ಆಡಳಿತಾತ್ಮಕ ಸಿದ್ಧತೆ ಹಾಗೂ ಅನುಷ್ಠಾನದ ಸ್ಥಿತಿಗತಿಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯುವ ನಿರೀಕ್ಷೆಯಿದೆ.


