ಪ್ರಭಾಸ್ ಅಭಿನಯದ ‘ಫೌಜಿ’ಗೆ ರಿಲೀಸ್ ಡೇಟ್ ಫಿಕ್ಸ್; ಡಿಸೆಂಬರ್ 3ಕ್ಕೆ ಅದ್ದೂರಿ ಬಿಡುಗಡೆ

1 Min Read
1 Min Read

ಹೈದರಾಬಾದ್: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪೀರಿಯಡ್ ಆ್ಯಕ್ಷನ್ ಚಿತ್ರ ‘ಫೌಜಿ’ (Fauzi) ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಚಿತ್ರವು 2026ರ ಡಿಸೆಂಬರ್ 3ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಬಿಡುಗಡೆ ದಿನಾಂಕದ ಜೊತೆಗೆ ಚಿತ್ರತಂಡ ಹೊಸ ಪೋಸ್ಟರ್‌ನ್ನೂ ಅನಾವರಣಗೊಳಿಸಿದ್ದು, ಅದರಲ್ಲಿ ಪ್ರಭಾಸ್ ರಕ್ತಸಿಕ್ತ ಹಾಗೂ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

‘ಸೀತಾ ರಾಮಂ’ ಖ್ಯಾತಿಯ ನಿರ್ದೇಶಕ ಹನು ರಾಘವಪುಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಧೈರ್ಯ, ಗೌರವ ಮತ್ತು ಸ್ವಾತಂತ್ರ್ಯದ ಕಥೆಯಾದ ‘ಫೌಜಿ’ ಕೇವಲ ಸಿನಿಮಾ ಅಲ್ಲ, ವಿಭಿನ್ನ ಅನುಭವವಾಗಲಿದೆ. ಡಿಸೆಂಬರ್ 3, 2026ರಂದು ‘ಫೌಜಿ’ಯ ಪಯಣ ಆರಂಭವಾಗಲಿದೆ” ಎಂದು ಬರೆದುಕೊಂಡಿದ್ದಾರೆ.

ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ, ಇಮಾನ್ವಿ ಹಾಗೂ ಕನ್ನಡದ ನಟಿ ಚೈತ್ರಾ ಜೆ. ಆಚಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೊಸ ಪೋಸ್ಟರ್‌ನಲ್ಲಿ ಪ್ರಭಾಸ್ ಯುದ್ಧದ ಗಾಯಗಳೊಂದಿಗೆ ತೀವ್ರ ಭಾವಭಂಗಿಯಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕಥೆ ಯುದ್ಧದ ಹಿನ್ನೆಲೆ ಹಾಗೂ ಆ್ಯಕ್ಷನ್‌ ಪ್ರಧಾನವಾಗಿರಲಿದೆ ಎಂಬ ಸುಳಿವು ನೀಡಿದೆ. ಆದರೆ ಚಿತ್ರದ ಕಥಾವಸ್ತುವನ್ನು ಚಿತ್ರತಂಡ ಇನ್ನೂ ಗೌಪ್ಯವಾಗಿಯೇ ಉಳಿಸಿಕೊಂಡಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಸುದೀಪ್ ಚಟರ್ಜಿ ಛಾಯಾಗ್ರಹಣ, ವಿಶಾಲ್ ಚಂದ್ರಶೇಖರ್ ಸಂಗೀತ ಹಾಗೂ ಕೋಟಗಿರಿ ವೆಂಕಟೇಶ್ವರ ರಾವ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ‘ದಿ ರಾಜಾ ಸಾಬ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಪ್ರಭಾಸ್, ಸದ್ಯ ‘ಸ್ಪಿರಿಟ್’, ‘ಸಲಾರ್ 2’ ಹಾಗೂ ‘ಕಲ್ಕಿ 2’ ಸೇರಿದಂತೆ ಹಲವು ಬಹುನಿರೀಕ್ಷಿತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article