. ‘ಗ್ರಾಮಾಯಣ’ಕ್ಕೆ ಹೊಸ ಸಂಗೀತ ಸ್ಪರ್ಶ: ಸಾಂಪ್ರದಾಯಿಕ ಜಾನಪದಕ್ಕೆ ಆಧುನಿಕ ಟಚ್ ನೀಡಿದ ಪೂರ್ಣಚಂದ್ರ ತೇಜಸ್ವಿ

2 Min Read
2 Min Read

ಬೆಂಗಳೂರು: ‘ಲೂಸಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಂಗೀತ ಶೈಲಿಗೆ ಗುರುತಿಸಿಕೊಂಡ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಇದೀಗ ‘ಗ್ರಾಮಾಯಣ’ ಚಿತ್ರದ ಮೂಲಕ ಮತ್ತೊಮ್ಮೆ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ವಿನಯ್ ರಾಜ್‌ಕುಮಾರ್ ಅಭಿನಯದ ಈ ಚಿತ್ರಕ್ಕೆ ದೇವನೂರು ಚಂದ್ರು ನಿರ್ದೇಶನವಿದ್ದು, ಲಹರಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಮನೋಹರ್ ನಿರ್ಮಿಸಿದ್ದಾರೆ.

ಚಿತ್ರದ ಸಂಗೀತದ ಕುರಿತು ಮಾತನಾಡಿದ ಪೂರ್ಣಚಂದ್ರ ತೇಜಸ್ವಿ, ‘ಗ್ರಾಮಾಯಣ’ ಕೇವಲ ಗ್ರಾಮೀಣ ಕಥಾಹಂದರ ಹೊಂದಿರುವ ಸಿನಿಮಾ ಅಲ್ಲ. 2006-07ರ ಕಾಲಘಟ್ಟದ ಹಿನ್ನೆಲೆಯಲ್ಲಿರುವ ಈ ಚಿತ್ರದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಂಶಗಳೂ ಪ್ರಮುಖವಾಗಿವೆ ಎಂದು ಹೇಳಿದ್ದಾರೆ.

“ಗ್ರಾಮೀಣ ಕಥೆ ಎಂದಾಕ್ಷಣ ಸಾಂಪ್ರದಾಯಿಕ ಜಾನಪದ ಸಂಗೀತವನ್ನೇ ಬಳಸುವ ಬದಲು, ಜಾನಪದ ಮತ್ತು ಆಧುನಿಕ ಸಂಗೀತದ ಸಂಯೋಜನೆಯ ಹೊಸ ಶೈಲಿಯನ್ನು ಪ್ರಯೋಗಿಸಿದ್ದೇನೆ. ಚಿತ್ರದ ಆತ್ಮವನ್ನು ಉಳಿಸಿಕೊಂಡೇ ಹೊಸ ಅನುಭವ ನೀಡುವ ಸಂಗೀತ ರೂಪಿಸುವುದು ನನ್ನ ಉದ್ದೇಶವಾಗಿತ್ತು,” ಎಂದು ತೇಜಸ್ವಿ ತಿಳಿಸಿದ್ದಾರೆ.

ಜುಲೈ 3ರಂದು ತೆರೆಗೆ ಬರಲಿರುವ ‘ಗ್ರಾಮಾಯಣ’ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಅಮೃತಾ ಅಯ್ಯರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗ್ರಾಮೀಣ ಸಂಸ್ಕೃತಿ, ಜೀವನಶೈಲಿ ಮತ್ತು ಬೇರುಗಳ ಸೊಗಡನ್ನು ಅನಾವರಣಗೊಳಿಸುವ ಚಿತ್ರವಾಗಲಿದೆ ಎಂದು ನಿರ್ದೇಶಕ ದೇವನೂರು ಚಂದ್ರು ಹೇಳಿದ್ದಾರೆ.

ಚಿತ್ರದ ಒಂಬತ್ತು ಹಾಡುಗಳ ಯೋಜನೆ ಕೊನೆಯಲ್ಲಿ ಏಳು ಹಾಡುಗಳಿಗೆ ಸೀಮಿತವಾಯಿತು. ಕಥೆಯ ನಿರೂಪಣೆಗೆ ಅವು ಹೆಚ್ಚು ಸೂಕ್ತವೆನಿಸಿತು ಎಂದು ತೇಜಸ್ವಿ ಹೇಳಿದ್ದಾರೆ. ಪ್ರತಿಯೊಂದು ಹಾಡು ಕಥೆಯ ಭಾವನೆಗೆ ಪೂರಕವಾಗಿದ್ದು, ಕೆಲವು ಹಾಡುಗಳು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದಿವೆ.

ಸಂಗೀತ ಕ್ಷೇತ್ರದಲ್ಲಿ ಕಳೆದ ಹನ್ನೆರಡು ವರ್ಷಗಳ ಪಯಣವನ್ನು ನೆನಪಿಸಿಕೊಂಡ ಅವರು, ಹಿಂದೆ ಉತ್ತಮ ಹಾಡುಗಳನ್ನು ರಚಿಸುವುದೇ ಮುಖ್ಯವಾಗಿತ್ತು. ಆದರೆ ಈಗ ಸಂಗೀತದ ಯಶಸ್ಸನ್ನು ವೀಕ್ಷಣೆಗಳ ಸಂಖ್ಯೆ ಮತ್ತು ಮಾರುಕಟ್ಟೆ ಪ್ರಭಾವದ ಆಧಾರದ ಮೇಲೆ ಅಳೆಯಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

“ಇಂದಿನ ದಿನಗಳಲ್ಲಿ ಹಾಡಿನ ಗುಣಮಟ್ಟಕ್ಕಿಂತಲೂ ಅದರ ವೀಕ್ಷಣೆ, ಪ್ರಚಾರ ಮತ್ತು ವ್ಯಾಪ್ತಿ ಹೆಚ್ಚು ಚರ್ಚೆಯಾಗುತ್ತಿದೆ. ಆದರೂ ಸಂಗೀತದ ಮೂಲ ಆತ್ಮವನ್ನು ಉಳಿಸಿಕೊಳ್ಳುವುದು ಮುಖ್ಯ. ಕೊನೆಗೆ ಪ್ರೇಕ್ಷಕರೇ ಹಾಡು ಮತ್ತು ಸಿನಿಮಾವನ್ನು ಸ್ವೀಕರಿಸುತ್ತಾರೆ,” ಎಂದು ಅವರು ಹೇಳಿದರು.

‘ಗ್ರಾಮಾಯಣ’ ಚಿತ್ರದ ಹಿನ್ನೆಲೆ ಸಂಗೀತದಲ್ಲಿಯೂ ಸಾಕಷ್ಟು ಹೊಸತನ ಪ್ರಯೋಗಿಸಲು ಅವಕಾಶ ದೊರೆತಿದ್ದು, ಸಂಗೀತ ನಿರ್ದೇಶಕರಾಗಿ ಅದೊಂದು ವಿಶೇಷ ಅನುಭವವಾಗಿದೆ ಎಂದು ಪೂರ್ಣಚಂದ್ರ ತೇಜಸ್ವಿ ಹೇಳಿದ್ದಾರೆ.

Share This Article