ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿರುವ ಬೆನ್ನಲ್ಲೇ, ಬಾಲಿವುಡ್ ನಟ ಆರ್. ಮಾಧವನ್ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ಅಗತ್ಯ ಎಂದು ಒತ್ತಾಯಿಸಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ಶಿಕ್ಷಣವು ದೇಶದ ಭವಿಷ್ಯವನ್ನು ರೂಪಿಸುವ ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ನ್ಯಾಯಸಮ್ಮತ, ಪಾರದರ್ಶಕ ಹಾಗೂ ಪ್ರತಿಭೆ ಆಧಾರಿತ ಶಿಕ್ಷಣ ವ್ಯವಸ್ಥೆಗೆ ಅರ್ಹ” ಎಂದು ಅವರು ಹೇಳಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಪರಿಶ್ರಮ, ಕನಸು ಹಾಗೂ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತವೆ. ಭಾರತದಲ್ಲಿ ಶಿಕ್ಷಣವು ಜೀವನ ರೂಪಿಸುವ ಪ್ರಮುಖ ಅಂಶವಾಗಿರುವುದರಿಂದ ಇಂತಹ ಘಟನೆಗಳು ಅತ್ಯಂತ ಗಂಭೀರವಾದವು ಎಂದು ಮಾಧವನ್ ಅಭಿಪ್ರಾಯಪಟ್ಟಿದ್ದಾರೆ.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ
ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಸರ್ಕಾರ ತ್ವರಿತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
“ಯುವಕರ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ಯಾರೂ ಮತ್ತೆ ಇಂತಹ ಕೃತ್ಯಕ್ಕೆ ಮುಂದಾಗದಂತೆ ಕಟ್ಟುನಿಟ್ಟಿನ ಶಿಕ್ಷೆ ವಿಧಿಸಬೇಕು. ಸರ್ಕಾರ ಈ ಪ್ರಕರಣದ ಲೋಪಗಳನ್ನು ಸರಿಪಡಿಸಿ ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನನಗಿದೆ” ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಧೈರ್ಯದ ಸಂದೇಶ
ಆತಂಕದಲ್ಲಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿರುವ ಮಾಧವನ್, “ತಾತ್ಕಾಲಿಕ ಸಮಸ್ಯೆಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸದಿರಲಿ. ನಿಮ್ಮ ಪ್ರತಿಭೆ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೇಲೆ ನಂಬಿಕೆ ಇಟ್ಟು ಮುಂದುವರಿಯಿರಿ” ಎಂದು ಕರೆ ನೀಡಿದ್ದಾರೆ.
‘ಸ್ವಾರ್ಥ ಹಿತಾಸಕ್ತಿಗಳ ಬಗ್ಗೆ ಎಚ್ಚರಿಕೆಯಿಂದಿರಿ’
ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸಂಕಲ್ಪವನ್ನು ಶ್ಲಾಘಿಸಿರುವ ಅವರು, “ನಿಮ್ಮ ಹೋರಾಟವನ್ನು ಸ್ವಾರ್ಥ ಹಿತಾಸಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಪ್ರತಿಭಟನೆಯ ಮೂಲ ಉದ್ದೇಶದಿಂದ ದಾರಿ ತಪ್ಪದಂತೆ ಜಾಗರೂಕರಾಗಿರಿ” ಎಂದು ಸಲಹೆ ನೀಡಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ಶಾಂತಿಯುತವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಹೇಳಿರುವ ಮಾಧವನ್, ಯುವಕರ ಪರ ನಿಂತು ಶಿಕ್ಷಣ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಸುಧಾರಣೆಗೆ ತಮ್ಮ ಧ್ವನಿಯನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮಾಧವನ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಅವರ ನಿಲುವನ್ನು ಬೆಂಬಲಿಸಿದರೆ, ಮತ್ತಷ್ಟು ಮಂದಿ ಟೀಕೆಗಳನ್ನೂ ಮಾಡಿದ್ದಾರೆ.


