ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಬೆದರಿಕೆ ಹಾಕಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ನಕಲಿ ವಿಡಿಯೋವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ಪ್ರೆಸ್ ಇನ್ಫರ್ಮೇಶನ್ ಬ್ಯೂರೋ (PIB) ಫ್ಯಾಕ್ಟ್ ಚೆಕ್ ಘಟಕ ಈ ಕುರಿತು ಸ್ಪಷ್ಟನೆ ನೀಡಿದ್ದು, ದೆಹಲಿ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಅವರು ಇಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿಸಿದೆ.
PIB ಫ್ಯಾಕ್ಟ್ ಚೆಕ್ ಪ್ರಕಾರ, ವೈರಲ್ ಆಗಿರುವ ವಿಡಿಯೋ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋವಾಗಿದ್ದು, ಸಾರ್ವಜನಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಪಾಕಿಸ್ತಾನ ಮೂಲದ ಪ್ರಚಾರ ಖಾತೆಗಳ ಮೂಲಕ ಸುಳ್ಳು ಮಾಹಿತಿಯ ಅಭಿಯಾನದ ಭಾಗವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ PIB ಮನವಿ ಮಾಡಿದೆ.
ಇದರ ಜೊತೆಗೆ, ಭಾರತ ಸರ್ಕಾರಕ್ಕೆ ಸಂಬಂಧಿಸಿದ ಅನುಮಾನಾಸ್ಪದ ಅಥವಾ ಸುಳ್ಳು ಮಾಹಿತಿಯಿರುವ ಪೋಸ್ಟ್‌ಗಳು ಕಂಡುಬಂದರೆ PIB ಫ್ಯಾಕ್ಟ್ ಚೆಕ್ ಘಟಕಕ್ಕೆ ವರದಿ ಮಾಡಬೇಕು ಹಾಗೂ ನಿಖರ ಮತ್ತು ಅಧಿಕೃತ ಮಾಹಿತಿಗಾಗಿ ಸರ್ಕಾರದ ಅಧಿಕೃತ ಮೂಲಗಳನ್ನೇ ಅವಲಂಬಿಸಬೇಕು ಎಂದು ಸಲಹೆ ನೀಡಿದೆ.


