ಉಕ್ರೇನ್‌ನ ಒಡೆಸಾ ಬಂದರಿನ ಬಳಿ ಹಡಗಿನ ಮೇಲೆ ದಾಳಿ: ನಾಲ್ವರು ಭಾರತೀಯರ ದುರ್ಮರಣ, ಭಾರತ ತೀವ್ರ ಖಂಡನೆ
ಉಕ್ರೇನ್‌ನ ಒಡೆಸಾ (Odesa) ಬಂದರಿನಿಂದ ಹೊರಟಿದ್ದ MV GOLDEN LEO ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದು, ಮತ್ತೋರ್ವ ಭಾರತೀಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಘಟನೆ ಸಂಭವಿಸಿದ ವೇಳೆ ಹಡಗಿನಲ್ಲಿ ಒಟ್ಟು 17 ಸಿಬ್ಬಂದಿ ಇದ್ದರು. ಅವರಲ್ಲಿ ಐವರು ಭಾರತೀಯರು ಸೇರಿದ್ದರು. ದಾಳಿಯಲ್ಲಿ ನಾಲ್ವರು ಭಾರತೀಯರು ಸಾವನ್ನಪ್ಪಿದ್ದು, ಒಬ್ಬರ ಆರೋಗ್ಯ ಸ್ಥಿತಿ ಆತಂಕಕಾರಿ ಎಂದು ತಿಳಿಸಿದೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುವುದು, ಅಮಾಯಕ ನಾಗರಿಕ ಸಿಬ್ಬಂದಿಯ ಜೀವಕ್ಕೆ ಅಪಾಯ ಉಂಟುಮಾಡುವುದು ಹಾಗೂ ಸಮುದ್ರ ಮಾರ್ಗದ ಮುಕ್ತ ಸಂಚಾರ ಮತ್ತು ವ್ಯಾಪಾರಕ್ಕೆ ಅಡ್ಡಿಪಡಿಸುವುದು ತೀವ್ರ ಖಂಡನೀಯ ಎಂದು ಭಾರತ ಹೇಳಿದೆ.
ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಮೃತರಾದ ಭಾರತೀಯರ ಕುಟುಂಬಗಳಿಗೆ ಭಾರತ ಸರ್ಕಾರ ಆಳವಾದ ಸಂತಾಪ ವ್ಯಕ್ತಪಡಿಸಿದ್ದು, ಗಾಯಗೊಂಡಿರುವ ಭಾರತೀಯ ಪ್ರಜೆಯು ಶೀಘ್ರ ಸಂಪೂರ್ಣ ಗುಣಮುಖರಾಗಲಿ ಎಂದು ಹಾರೈಸಿದೆ.


