ದೆಹಲಿಯಲ್ಲಿ ಭಾರೀ ಮಳೆ ಅಬ್ಬರ; ಜಲಾವೃತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಸರ್ಕಾರ ವೇಗ

1 Min Read
1 Min Read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗಿನಿಂದ ಭಾರೀ ಮಳೆ ಮತ್ತು ಗುಡುಗು-ಮಿಂಚಿನೊಂದಿಗೆ ಸುರಿದ ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಯಿತು.

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ ಸಫ್ದರ್‌ಜಂಗ್‌ನಲ್ಲಿ 73 ಮಿ.ಮೀ., ಲೋಧಿ ರಸ್ತೆ ಪ್ರದೇಶದಲ್ಲಿ 80 ಮಿ.ಮೀ., ಪಾಲಂನಲ್ಲಿ 63 ಮಿ.ಮೀ. ಹಾಗೂ ಆಯಾನಗರದಲ್ಲಿ 57 ಮಿ.ಮೀ. ಮಳೆಯಾಗಿದೆ.

ಜಲಾವೃತ ಪ್ರದೇಶಗಳಲ್ಲಿ ಸಮರೋಪಾದಿ ಕಾರ್ಯಾಚರಣೆ

ಮಳೆಯ ಹಿನ್ನೆಲೆಯಲ್ಲಿ ಉಂಟಾದ ಜಲಾವೃತ ಪರಿಸ್ಥಿತಿಯನ್ನು ನಿಭಾಯಿಸಲು ದೆಹಲಿ ಜಲ್ ಬೋರ್ಡ್, ಲೋಕೋಪಯೋಗಿ ಇಲಾಖೆ (PWD) ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿದೆ.

ಜಲಾವೃತ ಸಮಸ್ಯೆ ನಿವಾರಣೆಗೆ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮುಖ್ಯಮಂತ್ರಿಯ ಸೂಚನೆಯಂತೆ ಎಲ್ಲಾ ಇಲಾಖೆಗಳು ಅಲರ್ಟ್

ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನಿರ್ದೇಶನದಂತೆ ಸಂಬಂಧಿತ ಎಲ್ಲಾ ಇಲಾಖೆಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ನಗರದ ವಿವಿಧ ಪ್ರದೇಶಗಳಲ್ಲಿ ನೀರು ತ್ವರಿತವಾಗಿ ಹೊರಹಾಕಲು ಹಾಗೂ ಸಂಚಾರ ಸುಗಮಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಪಿಡಬ್ಲ್ಯುಡಿ ನಿಯಂತ್ರಣ ಕೊಠಡಿಗೆ ಸಚಿವರ ಭೇಟಿ

ದೆಹಲಿ ಲೋಕೋಪಯೋಗಿ ಇಲಾಖೆ (PWD) ಸಚಿವ ಪರ್ವೇಶ್ ಸಾಹಿಬ್ ಸಿಂಗ್ ಅವರು ಪಿಡಬ್ಲ್ಯುಡಿ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ, ಭಾರೀ ಮಳೆಯ ಹಿನ್ನೆಲೆಯಲ್ಲಿ ಇಲಾಖೆಯ ಸಿದ್ಧತೆ ಹಾಗೂ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳ ಪರಿಣಾಮವಾಗಿ, ಹಿಂದೆ ಜಲಾವೃತದಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಮಿಂಟೋ ಬ್ರಿಡ್ಜ್ ಸೇರಿದಂತೆ 45 ಸ್ಥಳಗಳಲ್ಲಿ ಈಗ ವಾಹನ ಸಂಚಾರ ಸುಗಮವಾಗಿದೆ ಎಂದು ಹೇಳಿದರು.

Share This Article