‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್ ರಿಲೀಸ್; ‘ಡೀಸೆಂಟ್ ಬಾಂಡ್’ ಆಗಿ ಶಿವಣ್ಣ ಸ್ಟೈಲಿಷ್ ಎಂಟ್ರಿ

2 Min Read
2 Min Read

ಬೆಂಗಳೂರು: ಕನ್ನಡ-ತೆಲುಗು ದ್ವಿಭಾಷಾ ಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ರಹಸ್ಯ, ಆಕ್ಷನ್ ಮತ್ತು ಸ್ಟೈಲಿಷ್ ಸ್ಪೈ ಜಗತ್ತಿನ ಕುತೂಹಲಕಾರಿ ಝಲಕ್‌ ಅನ್ನು ಸಿನಿಪ್ರಿಯರಿಗೆ ಪರಿಚಯಿಸಿದೆ. ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ತಂಡದ ಸಮ್ಮುಖದಲ್ಲಿ ಟೀಸರ್ ಅನಾವರಣಗೊಂಡಿತು.

ಹೇಮಂತ್ ಎಂ. ರಾವ್ ನಿರ್ದೇಶನದ ಈ ಚಿತ್ರವನ್ನು ಡಾ. ವೈಶಾಕ್ ಜೆ. ಗೌಡ ನಿರ್ಮಿಸುತ್ತಿದ್ದು, ಇಬ್ಬರ ಮೊದಲ ಸಂಯೋಜನೆಯಾಗಿದೆ.

ಸುಮಾರು ಎರಡು ನಿಮಿಷಗಳ ಟೀಸರ್‌ನಲ್ಲಿ ಕಥೆಯ ಬಗ್ಗೆ ಹೆಚ್ಚಿನ ಸುಳಿವು ನೀಡದಿದ್ದರೂ, ಸ್ಪೈ ಥ್ರಿಲ್ಲರ್‌ನ ರೋಚಕ ವಾತಾವರಣವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ರೆಟ್ರೋ ಶೈಲಿಯ ಹಿನ್ನೆಲೆಯೊಂದಿಗೆ ಮೂಡಿಬಂದಿರುವ ದೃಶ್ಯಗಳಲ್ಲಿ ಶಿವರಾಜ್‌ಕುಮಾರ್ ‘ಏಜೆಂಟ್ ಪ್ರಕಾಶ್’ ಹಾಗೂ ಧನಂಜಯ್ ‘ಏಜೆಂಟ್ ಶಂಕರ್’ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಹಸ್ಯ ಕಾರ್ಯಾಚರಣೆ, ವಂಚನೆ, ಸಾಹಸ ಮತ್ತು ಆಕ್ಷನ್‌ನ ಸುತ್ತ ಸಾಗುವ ಕಥೆಯ ಸುಳಿವು ಟೀಸರ್ ನೀಡುತ್ತದೆ.

ಗನ್‌ಫೈಟ್‌, ಸ್ಫೋಟಗಳು, ವೇಗದ ಚೇಸಿಂಗ್ ದೃಶ್ಯಗಳು ಮತ್ತು ಹ್ಯಾಂಡ್-ಟು-ಹ್ಯಾಂಡ್ ಆಕ್ಷನ್‌ಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿವೆ. ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಹಾಗೂ ಚರಣ್ ರಾಜ್ ಅವರ ಹಿನ್ನಲೆ ಸಂಗೀತ ಚಿತ್ರದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಟೀಸರ್‌ನ ಕೆಲ ದೃಶ್ಯಗಳಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಮತ್ತು ಸ್ಟೈಲ್, ಅವರ ತಂದೆ ಡಾ. ರಾಜ್‌ಕುಮಾರ್ ಅಭಿನಯಿಸಿದ್ದ ‘ಆಪರೇಷನ್ ಡೈಮಂಡ್ ರಾಕೆಟ್’ ಸೇರಿದಂತೆ ಬಾಂಡ್ ಶೈಲಿಯ ಕನ್ನಡ ಸಿನಿಮಾಗಳ ನೆನಪನ್ನು ಮೂಡಿಸುತ್ತದೆ. ಆ ಪರಂಪರೆಯನ್ನು ಆಧುನಿಕ ಸ್ಪರ್ಶದೊಂದಿಗೆ ಹೇಮಂತ್ ಎಂ. ರಾವ್ ಹೊಸ ರೂಪದಲ್ಲಿ ಕಟ್ಟಿಕೊಡುತ್ತಿರುವುದು ಟೀಸರ್‌ನಲ್ಲಿ ಗೋಚರಿಸುತ್ತದೆ.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್, “ಹೇಮಂತ್ ಎಂ. ರಾವ್ ಅದ್ಭುತ ನಿರ್ದೇಶಕ. ಧನಂಜಯ್ ಜೊತೆ ಮೂರನೇ ಬಾರಿ ಹಾಗೂ ಪ್ರಿಯಾಂಕಾ ಮೋಹನ್ ಜೊತೆ ಎರಡನೇ ಬಾರಿ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ಚರಣ್ ರಾಜ್ ಇಂದಿನ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಒಬ್ಬರು. ಸಿನಿಮಾ ನನ್ನ ಪ್ಯಾಷನ್. ಉತ್ತಮ ಕೆಲಸಕ್ಕೆ ನಾನು ಎಂದಿಗೂ ಇಲ್ಲ ಎನ್ನುವುದಿಲ್ಲ. ‘666 ಆಪರೇಷನ್ ಡ್ರೀಮ್ ಥಿಯೇಟರ್’ ನನಗೆ ವಿಶೇಷ ಅನುಭವ ನೀಡಿದೆ” ಎಂದು ಹೇಳಿದರು.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, “ನಾನು ಸಿನಿಮಾಗಳಲ್ಲಿ ಕಾಣುವ ಸಾಮಾನ್ಯ ಬಾಂಡ್ ಅಲ್ಲ. ನಾನು ‘ಡೀಸೆಂಟ್ ಬಾಂಡ್’. ಜನರನ್ನು ಒಟ್ಟಿಗೆ ಕೊಂಡೊಯ್ಯುವ, ಬಾಂಧವ್ಯ ಬೆಳೆಸುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಕುತೂಹಲ ಮೂಡಿಸಿದರು.

Share This Article